ಏಷ್ಯ: ಪ್ರಪಂಚದ ಅತ್ಯಂತ ದೊಡ್ಡ ಖಂಡ. ವಿಸ್ತೀರ್ಣ 44,680,718 ಚ.ಕಿಮೀ. ಇದು ಭೂಪ್ರದೇಶದ ಮೂರನೆಯ ಒಂದು ಭಾಗವನ್ನಾವರಿಸಿದೆ. ಯೂರಲ್ ಪರ್ವತ, ಯೂರೆಲ್ ನದಿ, ಕ್ಯಾಸ್ಟಿಯನ್ ಸಮುದ್ರ, ಕಾಕಸಸ್ ಪರ್ವತ, ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ-ಇವು ಈ ಖಂಡದ ಪಶ್ಚಿಮ ಮೇರೆ. ಪುರ್ವದಲ್ಲಿ ಪೆಸಿಫಿಕ್ ಸಾಗರ, ದಕ್ಷಿಣದಲ್ಲಿ ಹಿಂದೂಸಾಗರ ಮತ್ತು ಉತ್ತರದಲ್ಲಿ ಆರ್ಕಟಿಕ್ ಸಾಗರಗಳು ಎಲ್ಲೆಗಳಾಗಿವೆಯೆನ್ನಬಹುದು. ಆದರೆ ಇಂಡೊನೇಷ್ಯನ್ ದ್ವೀಪಸ್ತೋಮ, ದಕ್ಷಿಣೋತ್ತರವಾಗಿ ಪೆಸಿಫಿಕ್ನಲ್ಲಿ ಹಬ್ಬಿರುವ ದ್ವೀಪಗಳ ಸಾಲು-ಇವೆಲ್ಲ ಏಷ್ಯಕ್ಕೆ ಸೇರಿದ ಪ್ರದೇಶಗಳೇ. ಇಡೀ ಭೂಮಿಯ ಮೇಲೆ ಇದೊಂದು ಬೃಹತ್ ಸಮದ್ವಿಭುಜ ತ್ರಿಭುಜದಂತೆ ಕಾಣುತ್ತದೆ.

ಇದರ ಬೃಹತ್ ಸಮಭುಜಗಳ ಪೈಕಿ ಒಂದು ಏಡನ್ನಿನಿಂದ ಬೇರಿಂಗ್ ಜಲ ಸಂಧಿಯವರೆಗೂ ಇನ್ನೊಂದು ಸಿಂಗಪುರದಿಂದ ಬೇರಿಂಗಿನವರೆಗೂ ಇವೆ. ಇವುಗಳಲ್ಲಿ ಒಂದೊಂದರ ಉದ್ದವೂ 10460.736 ಕಿಮೀ. ಏಡನ್ನಿನಿಂದ ಸಿಂಗಪುರದವರೆಗೆ ಸಾಗಿರುವ ಮೂರನೆಯ ಭುಜದ ಉದ್ದ 7242.048 ಕಿಮೀ.

ಈ ವಿಶಾಲವಾದ ಭೂಖಂಡದ ಒಂದು ವೈಶಿಷ್ಟ್ಯವೆಂದರೆ ಇದು ಇತರ ಖಂಡ ಗಳೊಂದಿಗೆ ಹೊಂದಿರುವ ಸಂಪರ್ಕ. ಯುರೋಪು ವಾಸ್ತವವಾಗಿ ಇದರ ಪಶ್ಚಿಮಭಾಗ. ಏಷ್ಯವೂ ಆಫ್ರಿಕವೂ ಸೂಯೆಜಿ಼ನ ಬಳಿ ಸೇರುತ್ತವೆ. ಉತ್ತರ ಅಮೆರಿಕಕ್ಕೂ ಏಷ್ಯಕ್ಕೂ ನಡುವೆ ಬೇರಿಂಗ್ ಜಲಸಂಧಿಯಿದೆ. ಇಂಡೊನೇಷ್ಯನ್ ದ್ವೀಪಸ್ತೋಮಗಳಾಚೆಯೇ ಆಸ್ಟ್ರೇಲಿಯ. ಹೀಗೆ ಇದರ ಸನ್ನಿವೇಶದ ಪ್ರಾಮುಖ್ಯ ಹೆಚ್ಚಿನದು. ಏಷ್ಯದ ಇತಿಹಾಸವೇ ಮುಂತಾದ ನಾನಾ ಅಂಶಗಳ ಮೇಲೆ ಈ ಸನ್ನಿವೇಶವೂ ಸಾಕಷ್ಟು ಪ್ರಭಾವ ಬೀರಿದೆಯೆನ್ನಬಹುದು.

ಸಾಗರಗಳೊಂದಿಗೂ ಏಷ್ಯದ್ದು ಇದೇ ರೀತಿಯ ಸಂಬಂಧ. ಈ ಖಂಡದ ಒಂದು ಭಾಗವಾದ ಏಷ್ಯಮೈನರ್ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿದೆ. ಇದರ ಮೂಲಕ ಈ ಖಂಡಕ್ಕೆ ಅಟ್ಲಾಂಟಿಕ್ ಸಾಗರದ ಸಂಪರ್ಕವುಂಟು. ಏಷ್ಯದ ಉತ್ತರದಲ್ಲಿರುವುದು ಆರ್ಕ್ಟಿಕ್ ಸಾಗರ. 

ಏಷ್ಯದ ಭಾಗಗಳಾದ ಕ್ಯಾಮ್ಚ್ಯಾಟ್ಕ ಸ್ಯಾಕಲೀನ್, ಜಪಾನ್ ಮತ್ತು ಫಿಲಿಪೀನ್ಸ್‌ ಪೆಸಿಫಿಕ್ ಸಾಗರದಲ್ಲೆ ಇವೆ. ಅರೇಬಿಯ, ದಕ್ಷಿಣ ಭಾರತ ಮತ್ತು ಮಲಯ ಈ ಮೂರು ಪರ್ಯಾಯದ್ವೀಪಗಳು ಹಿಂದೂಸಾಗರದ ಜಲದಲ್ಲಿ ಮೈ ತೊಳೆಯುತ್ತವೆ.

260ಪು. ರೇಖಾಂಶದಿಂದ 1700 ಪ. ರೇಖಾಂಶದ ವರೆಗೂ 820 ಉ. ಅಕ್ಷಾಂಶದಿಂದ 100 ದ. ಅಕ್ಷಾಂಶದ ವರೆಗೂ ಈ ಖಂಡ ಹರಡಿದೆ. ದಕ್ಷಿಣದಲ್ಲಿ ಈಸ್ಟ್‌ ಇಂಡೀಸ್ ಮುಖಾಂತರ ಸಮಭಾಜಕವೃತ್ತ ಹಾದು ಹೋಗುತ್ತದೆ. ಅರೇಬಿಯ, ಭಾರತ ಮತ್ತು ಮಯನ್ಮಾರ್ಗಳ ಮಧ್ಯಭಾಗದಲ್ಲೂ ದಕ್ಷಿಣ ಚೀನದ ಮುಖಾಂತರವೂ ಹಾದು ಹೋಗುವ ರೇಖೆ ಕರ್ಕಾಟಕ ಸಂಕ್ರಾಂತಿವೃತ್ತ. ಸೈಬೀರಿಯದ ಉತ್ತರದ ಅಂಚಿನಲ್ಲಿ ಉತ್ತರ ಮೇರುವೃತ್ತವಿದೆ. ಉತ್ತರಾರ್ಧ ಗೋಳದಲ್ಲಿನ ಸುಮಾರು ಅರ್ಧ ಪ್ರದೇಶ ಏಷ್ಯದಲ್ಲಿದೆ.

ಈ ಖಂಡದ ಸಮುದ್ರತೀರ ಅಸ್ತವ್ಯಸ್ತವಾಗಿದೆ. ಇದರ ಮೂರು ಕಡೆಗಳಲ್ಲಿ ಸಮುದ್ರವಿದ್ದರೂ ಇದರ ವಿಸ್ತಾರದ ದೃಷ್ಟಿಯಿಂದ ಸಮುದ್ರತೀರ ಬಹಳ ಕಡಿಮೆ (53108.352ಕಿಮೀ). ಅಲ್ಲದೆ ಇದು ಹೆಚ್ಚು ಡೊಂಕಾಗಿಯೂ ಇಲ್ಲ.

ಹಲವು ವಿಚಾರಗಳಲ್ಲಿ ಈ ಖಂಡ ವೈಶಿಷ್ಟ್ಯಪೂರ್ಣ. ಇಲ್ಲಿರುವ ಮೃತಸರೋವರ ಪ್ರಪಂಚದ ಅತ್ಯಂತ ತಗ್ಗಿನ ಪ್ರದೇಶದಲ್ಲಿದೆ (ಸಮುದ್ರ ಮಟ್ಟಕ್ಕಿಂತ 1,286' ಕೆಳಗೆ). ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರವೂ ಇಲ್ಲುಂಟು (ಎವರೆಸ್ಟ್‌). ಅತ್ಯಂತ ಕಡಿಮೆ ಹಾಗೂ ಅತ್ಯಂತ ಹೆಚ್ಚಿನ ಉಷ್ಣತೆಗಳನ್ನೂ ಇಲ್ಲಿ ಕಾಣಬಹುದು. ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ಹುಟ್ಟಿದ್ದು ಇಲ್ಲೆ. ಎಲ್ಲ ರೀತಿಯ ಜನರೂ ಇಲ್ಲಿ ವಾಸಿಸುತ್ತಾರೆ. ಅಲೆಮಾರಿ ಜನಾಂಗದವರೂ ಅತ್ಯಂತ ಮುಂದುವರಿದ ಜನಾಂಗದವರೂ ಇಲ್ಲಿ ಇದ್ದಾರೆ. ಜಗತ್ತಿನ ಮುಖ್ಯ ಧರ್ಮಗಳಿಗೆಲ್ಲ ಏಷ್ಯವೇ ಉಗಮಸ್ಥಾನ. ಜುಡಾಯಿಸಂ ಜೆರುಸಲೆಂನಲ್ಲಿ ಜನಿಸಿತು. ಕ್ರೈಸ್ತ ಧರ್ಮ ಪ್ಯಾಲೆಸ್ಟೈನಿನಲ್ಲಿ ಜನಿಸಿ ಜಗತ್ತಿನಾದ್ಯಂತ ಹರಡಿತು. ಅರೇಬಿಯದಲ್ಲಿ ಜನಿಸಿದ ಇಸ್ಲಾಂ ಧರ್ಮ ಪುರ್ವಾರ್ಧಗೋಳದಲ್ಲೆಲ್ಲ್ಲ ಹರಡಿದೆ. ಬೌದ್ದ ಹಾಗೂ ಹಿಂದೂಧರ್ಮಗಳು ಭಾರತದಲ್ಲಿ ಜನ್ಮ ತಳೆದವು. ಇರಾನಿನ ಪಾರ್ಸೀಧರ್ಮ, ಜಪಾನಿನಲ್ಲಿನ ಷಿಂಟೊ, ಚೀನದ ಕನ್ಫ್ಯೂಷಿಯನಿಸಂ ಮತ್ತು ಟಾವೊಇಸಂ-ಇವು ಪ್ರಪಂಚದ ಇತರ ಧರ್ಮಗಳು-ಇವೂ ಏಷ್ಯದಲ್ಲಿ ಜನಿಸಿದವು. ಪ್ರಪಂಚಕ್ಕೆ ಬೇಕಾದ ಸಂಬಾರಪದಾರ್ಥ, ರೇಷ್ಮೆ, ಪೆಟ್ರೋಲಿಯಂ, ಮ್ಯಾಂಗನೀಸ್,  ಅಭ್ರಕಗಳನ್ನು ಒದಗಿಸುವುದೂ ಈ ಖಂಡವೇ. ಜಗತ್ತಿನಲ್ಲಿರುವ ಎಲ್ಲ ರೀತಿಯ ಸಸ್ಯವರ್ಗಗಳೂ ಖನಿಜಗಳೂ ಇಲ್ಲಿ ದೊರೆಯುತ್ತವೆ. ಅತ್ಯಂತ ಕಡಿಮೆ ಹಾಗೂ ಅತ್ಯಂತ ಹೆಚ್ಚಿನ ಜನಸಾಂದ್ರತೆಯ ಪ್ರದೇಶಗಳು ಇಲ್ಲುಂಟು. ವಿಸ್ತಾರದಲ್ಲಿ ವಿಶ್ವದ ಭಾಗದಷ್ಟಿರುವ ಈ ಖಂಡದಲ್ಲಿ ಅದರ ರಷ್ಟು ಜನ ವಾಸಿಸುತ್ತಾರೆ.

 ಮೇಲ್ಮೈಲಕ್ಷಣ 
ಏಷ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹದು: 
 1. ಉತ್ತರದ ತಗ್ಗು ಪ್ರದೇಶ. ಆರ್ಕ್ಟಿಕ್ ಸಾಗರದಿಂದ ನೈಋತ್ಯಾಭಿಮುಖವಾಗಿ ಮಹಾತ್ರಿಭುಜದಂತೆ ಹಬ್ಬಿರುವ ಈ ಭಾಗ ಸೈಬೀರಿಯದ ಬಹು ಭಾಗವನ್ನೊಳಗೊಂಡಿದೆ. ಯುರೋಪಿನ ಮಹಾಮೈದಾನಕ್ಕೂ ಇದಕ್ಕೂ ನಡುವೆ ಯೂರೆಲ್ ಪರ್ವತಗಳು ಗಡಿರೇಖೆ. ಇಲ್ಲಿ ಹರಿಯುವ ಆಬ್, ಯೆನಿಸೇ ಮತ್ತು ಲೀನ ನದಿಗಳು ಬಲು ಉದ್ದ, ನಿಧಾನ. ಆರ್ಕ್ಟಿಕ್ ಸಾಗರದ ಕಡೆಗೆ ನೆಲದ ಇಳಿಜಾರು ಬಲು ಅಲ್ಪ. ಇವುಗಳ ಮುಖಭಾಗದಲ್ಲಿ ನೀರು ವರ್ಷದಲ್ಲಿ ಕೆಲಕಾಲ ಹೆಪ್ಪುಗಟ್ಟುತ್ತದೆ. ಆಗ ಮೇಲ್ಗಡೆಯಿಂದ ಹರಿದು ಬಂದ ನೀರು ಮುಂದಾರಿಗಾಣದೆ 
ನೆಲದ ಮೇಲೆ ಹರಡುವುದು ಅನಿವಾರ್ಯ. ತತ್ಫಲವಾಗಿ ಆ ಭೂಮಿಯೆಲ್ಲ ಜೌಗಾಗಿ ಪರಿಣಮಿಸುತ್ತದೆ. ನೈಋತ್ಯದಲ್ಲಿ ಆರಲ್ ಸರೋವರದ ಪ್ರದೇಶ ಒಂದು ಬೋಗುಣಿಯಂತಿದ್ದು ಇದರೊಳಕ್ಕೆ ಕೆಲವು ನದಿಗಳು ಹರಿಯುತ್ತವೆ.

 2. ಉತ್ತರದ ತಗ್ಗುನೆಲಕ್ಕೆ ದಕ್ಷಿಣದಲ್ಲಿರುವ ಕೇಂದ್ರೀಯ ತ್ರಿಭುಜವೇ ಏಷ್ಯದ ಎರಡನೆಯ ಭಾಗ. ಏಷ್ಯದ ಮಹಾ ಪರ್ವತಶ್ರೇಣಿಗಳನ್ನೂ ಅವುಗಳ ಹೆಗಲ ಮೇಲೆ ಕುಳಿತ ಪ್ರಸ್ಥಭೂಮಿಗಳನ್ನೂ ಒಳಗೊಂಡಿರುವುದು. ಈ ಪ್ರದೇಶವೇ, ಈ ತ್ರಿಭುಜದ ಪಶ್ಚಿಮಕ್ಕೆ ಏಷ್ಯ ಮೈನರ್ವರೆಗೂ ಆಗ್ನೇಯದಲ್ಲಿ ಇಂಡೋ-ಚೀನ ಮತ್ತು ಈಸ್ಟ್‌ ಇಂಡೀಸ್ಗಳ ಉದ್ದಕ್ಕೂ ಪರ್ವತಗಳು ಕವಲೊಡೆದಿವೆ.

ಹೀಗೆ ಕೆಂಪು ಸಮುದ್ರದಿಂದ ಬೇರಿಂಗ್ ಜಲಸಂಧಿಯವರೆಗೂ ಹಬ್ಬಿರುವ ಪರ್ವತಾವಳಿಗಳು ಅತ್ಯಂತ ಆಕರ್ಷಣೀಯ. ಇವು ಪ್ರಪಂಚದ ಮಧ್ಯಂತರ ಪರ್ವತಾವಳಿಯ ಒಂದು ಭಾಗ. ಆಗ್ನೇಯ ಹಾಗೂ ವಾಯವ್ಯ ಏಷ್ಯಗಳ ಮಧ್ಯೆ ವಾಯುಗುಣದ ಪ್ರಭಾವ ಹಾಗೂ ಸಂಚಾರ ಮಾರ್ಗಗಳಿಗೆ ಇವು ದೊಡ್ಡ ಅಡ್ಡಿ. ಆರ್ಮೀನಿಯನ್ ಮತ್ತು ಪಾಮಿರ್ ಪರ್ವತಗ್ರಂಥಗಳಲ್ಲಿ ಇವುಗಳ ಉಗಮ. ಇವು ಒಳನಾಡಿನ ಜಲಾನಯನ ಪ್ರದೇಶಗಳು. 

ಆರ್ಮೀನಿಯನ್ ಗ್ರಂಥಿಯಿಂದ ಪೂರ್ವದ ಕಡೆಗೆ ಇರಾನ್ ಪ್ರಸ್ಥಭೂಮಿಯ ಉತ್ತರಕ್ಕೆ ಇರುವ ಪರ್ವತಗಳು ಎಲ್ಬeóರ್ï ಮತ್ತು ಕೊಪೆಟ್ದಾಗ್. ಡಮಾವಂಡ್ (18,580) ಅತ್ಯುನ್ನತ ಶಿಖರ. ಈ ಪರ್ವತಗಳು ಹಿಂದೂಕುಷ್ ಪರ್ವತಗಳ ಮುಖಾಂತರ ಪಾಮಿರ್ ಗ್ರಂಥಿ ತಲಪುತ್ತವೆ. ಇದರ ಇನ್ನೊಂದು ಕವಲೇ ಸುಲೇಮಾನ್ ಪರ್ವತವಾಗಿ ಪಾಮಿರ್ ಗ್ರಂಥಿಯನ್ನು ತಲಪುತ್ತದೆ. ಇಲ್ಲಿ ಭೂಕಂಪಗಳು ಹೆಚ್ಚು. ಈ ಭೂಭಾಗ ಇನ್ನೂ ಅಸ್ಥಿರ ಎಂಬುದು ಸ್ಪಷ್ಟ.

ಇಲ್ಲಿನ ಆನೇಕ ಪರ್ವತಾವಳಿಗಳು ಚಲ್ಲಾಪಿಲ್ಲಿಯಾಗಿ ಅವ್ಯವಸ್ಥಿತವಾಗಿ ಹರಡಿವೆಯಾದರೂ ಮುಖ್ಯವಾದ ಪರ್ವತಸಾಲುಗಳು ಇರಾನಿನಿಂದ ಪೆಸಿಫಿಕ್ ಸಾಗರದವರೆಗೆ ಕ್ರಮಬದ್ಧವಾದ ರೀತಿಯಲ್ಲಿ ಹರಡಿವೆ. ಇವುಗಳ ಪೈಕಿ ಅತ್ಯಂತ ಉತ್ತರದಲ್ಲಿ ಆಗ್ನೇಯಾಭಿಮುಖವಾಗಿ ಸಾಗುವುದೇ ಟಿಯೆನ್ ಷಾನ್ ಶ್ರೇಣಿ. ಚೀನದವರು ಇದನ್ನು ಸ್ವರ್ಗಪರ್ವತವೆಂದು ಕರೆಯುತ್ತಾರೆ. ಇದರಿಂದ ಭಿನ್ನವಾಗಿರುವುದು ಆಲ್ಟೈ ಪರ್ವತ. ಟಯೆನ್ ಷಾನ್ ದಕ್ಷಿಣಕ್ಕಿರುವ ಎರಡು-ಮೂರನೆಯ ಶ್ರೇಣಿಗಳು ಕೂನ್ಲೂನ್ ಮತ್ತು ಆಸ್ಟಿನ್ಟಾ. ಕೂನ್ಲೂನ್ ಏಷ್ಯದ ಬೆನ್ನೆಲುಬು, ಚೀನದ ಬೀಸಣಿಗೆ. ಹಲವು ಕವಲುಗಳಿರುವ ಈ ಪರ್ವತದ ವಿಸ್ತಾರ 1126.54008 ಕಿಮೀ. ಒಂದು ದೃಷ್ಟಿಯಲ್ಲಿ ಆಸ್ಟಿನ್ ಟಾ ಇದರ ಭಾಗ. ಇದು ಪುರಾತನ, ನಗ್ನೀಕೃತ, ಷಿಷಿಹ್ಷಾನ್ ಇನ್ನೊಂದು 
ಕವಲು. ಇದರ ಎತ್ತರ ಇನ್ನೂ ಪತ್ತೆಯಾಗಿಲ್ಲ.

ಇವೆಲ್ಲಕ್ಕಿಂತ ಭವ್ಯವಾಗಿರುವ ಶ್ರೇಣಿಗಳೆಂದರೆ ಹಿಮಾಲಯ. ಹಿಮಾಲಯದಲ್ಲಿ ಐದು ಸಮಾನಾಂತರ ಉಪಶ್ರೇಣಿ ವಿಭಾಗಗಳಿವೆ. ಬೃಹತ್ ಹಿಮಾಲಯದಲ್ಲಿ 24,000ದಿ ಗಿಂತಲೂ ಎತ್ತರವಾಗಿರುವ 60ಕ್ಕಿಂತಲೂ ಹೆಚ್ಚು ಶಿಖರಗಳುಂಟು. ಕಿರಿ ಹಿಮಾಲಯದಲ್ಲಿರುವ ಪರ್ವತಸಾಲುಗಳು ಅನೇಕ. 29,028ದಿ ಎತ್ತರವಾಗಿರುವ ಎವರೆಸ್ಟ್‌ ವಿಶ್ವದ ಮಹೋನ್ನತ ಶಿಖರ. ಇದು ಜಗತ್ತಿನ ಮಾತೃದೇವತೆ (ಜೋಮೊಉಂಗ್ಮ). ಕಾಂಚನಗಂಗಾ (ಕಂಚೆನ್ಜಂಗಾ-28,146ದಿ), ಮಕಲು (27,790ದಿ), ಧವಳಗಿರಿ (26,826ದಿ), ನಂಗಾಪರ್ಬತ್ (26,660ದಿ). ಅನ್ನಪುರ್ಣ (26,503ದಿ) ಗೋಸೈನ್ಟಾನ್ (26,291ದಿ)-ಇವು ಇತರ ಕೆಲವು ಮುಖ್ಯ ಶಿಖರಗಳು. 

ಮಯನ್ಮಾರ್ನಲ್ಲಿ ಈ ಪರ್ವತಗಳು ದಕ್ಷಿಣಾಭಿಮುಖವಾಗಿ ಮುಂದುವರಿಯುತ್ತವೆ. ಅಲ್ಲಿ ಇವುಗಳ ಹೆಸರು ಅರಕಾನ್ ಹಾಗೂ ಪೆಗು ಯೋಮ. ಅಂಡಮಾನ್, ನಿಕೋಬಾರ್ ಮತ್ತು ಇಂಡೋನೇಷ್ಯಗಳ ಮುಖಾಂತರ ಸಾಗುವ ಈ ಪರ್ವತಶ್ರೇಣಿಗಳು ಮಲಯ ಮತ್ತು ಅನ್ನಾಂ ಪರ್ವತಗಳಾಗಿ ಒಡೆದು ಮುಂದುವರಿದು ಕಣ್ಮರೆಯಾಗುತ್ತವೆ.

ಹಿಮಾಲಯಕ್ಕಿಂತ ಕಡಿಮೆ ಎತ್ತರ ಉಳ್ಳದ್ದೆಂದರೆ ಕಾರಕೋರಂ. ಇದು ವಾಯವ್ಯದ ಕಡೆ ತುರ್ಕಿಸ್ತಾನದ ಕಡೆಗೆ ಮುಂದುವರಿಯುತ್ತದೆ. ಇಲ್ಲಿ ಗಾಡ್ವಿನ್ ಆಸ್ಟಿನ್ ಎಂಬ ಶಿಖರವಿದೆ. ಇದು ಜಗತ್ತಿನ ಎರಡನೆಯ ಉನ್ನತ ಶಿಖರ (28,250ದಿ) ಇದರೊಂದಿಗೆ ಗಷೆರ್ ಬ್ರುಮ್ (26,470ದಿ) ಮತ್ತು ರಕಪುಷಿ (25,560ದಿ) ಶಿಖರಗಳೂ ಇಲ್ಲಿವೆ.

ಪರ್ವತಗಳ ಮಧ್ಯದಲ್ಲಿರುವ ಟೆಬೆಟ್ ಒಂದು ಬೃಹತ್ ಪ್ರಸ್ಥಭೂಮಿ: ಪ್ರಪಂಚದ ಮೇಲ್ಛಾವಣೆ 16,000ದಿ-18,000ದಿ ಎತ್ತರ. 2414.016 ಕಿಮೀ ಉದ್ದ, 1287.4752 ಕಿಮೀ ಅಗಲ ಇದೆ.
ಪಾಮಿರ್ ಗ್ರಂಥಿ ಇನ್ನೂ ಎತ್ತರ (20,000'). ಈ ಗ್ರಂಥಿಯಲ್ಲಿ ಒಂದರೊಳ ಗೊಂದು ಸೇರಿರುವ ಕಡಿದು ಬಂಡೆಗಳೂ ಶಿಲಾಪರ್ವತಗಳೂ ಇವೆ. 

ಏಷ್ಯದ ಪುರ್ವದ ಅಂಚಿನ ಉದ್ದಕ್ಕೂ ಮಾಲೆಯಾಕಾರದಲ್ಲಿ ಹಬ್ಬಿರುವ ದ್ವೀಪಗಳ ಮೇಲೆ ಪರ್ವತಗಳ ಹಲವು ಸರಪಣಿಗಳಿವೆ. ಈ ದ್ವೀಪಗಳು ಅಗ್ನಿಪರ್ವತಗಳಿಂದಾದವು.
ಏಷ್ಯದ ಮಡಿಕೆ ಪರ್ವತಶ್ರೇಣಿಗಳ ನಡುವಣ ಪ್ರದೇಶಗಳು ಪ್ರಸ್ಥ ಭೂಮಿಗಳು. ಇವುಗಳಲ್ಲಿ ಹಲವು ಚಪ್ಪಟೆಯಾಗಿವೆ. ಹಿಮಾಲಯ ಕೂನ್ಲೂನ್ ಪರ್ವತಗಳ ನಡುವೆ ಇರುವುದು ಟಿಬೆಟ್ ಪ್ರಸ್ಥಭೂಮಿ. ಕೂನ್ಲೂನಿಗೂ ಆಸ್ಟಿನ್ ಟಾ ಪರ್ವತಗಳಿಗೂ ನಡುವೆ ಇರುವ ಸಣ್ಣ ಬೋಗುಣಿ ಟಿಬೆಟ್ ಪ್ರಸ್ಥಭೂಮಿಗಿಂತ ಸ್ವಲ್ಪ ತಗ್ಗು; ಜೌಗು. ಆಸ್ಟಿನ್ ಟಾ ಟಿಯೆನ್ ಷಾನ್ಗಳ ನಡುವೆ ಇರುವ ಡಾರೀಮ್ ಬೋಗುಣಿ ಶುಷ್ಕ. ನಡುವೆ ಒಂದು ಸಣ್ಣ ಸರೋವರವಿದೆ. ಆಲ್ಟೈಗೆ ದಕ್ಷಿಣದಲ್ಲಿ ಆಸ್ಟಿನ್ ಟಾ ಪರ್ವತಗಳ ಈಶಾನ್ಯಕ್ಕೆ ಇರುವ ಪ್ರದೇಶವೇ ಗೋಬಿ ಮರುಭೂಮಿ. ಪಾಮಿರ್ ಗ್ರಂಥಿಯ ಪಶ್ಚಿಮದ ಉತ್ತರ ದಕ್ಷಿಣ ಪರ್ವತ ಕವಲುಗಳ ನಡುವೆ, ಪರ್ಷಿಯದ ಬಹುಭಾಗನ್ನಾವರಿಸಿರುವುದು ಇರಾನ್ ಪ್ರಸ್ಥಭೂಮಿ. ಕಪ್ಪು ಸಮುದ್ರಕ್ಕೂ ಮೆಡಿಟರೇನಿಯನ್ ಸಮುದ್ರಕ್ಕೂ ನಡುವೆ, ಆರ್ಮೀ ನಿಯನ್ ಗ್ರಂಥಿಗೆ ಪಶ್ಚಿಮದಲ್ಲಿ, ಏಷ್ಯ ಮೈನರ್ ಪ್ರಸ್ಥಭೂಮಿ ಇದೆ.

 3. ದಕ್ಷಿಣದ ಪುರಾತನ ಪ್ರಸ್ಥಭೂಮಿಗಳು ಏಷ್ಯದ ಇನ್ನೊಂದು ಭೌಗೋಳಿಕ ವಿಭಾಗ, ಅರೇಬಿಯ ಪ್ರಸ್ಥಭೂಮಿ ಹಳೆಯ ಗಟ್ಟಿ ಬಂಡೆಗಳಿಂದ ಕೂಡಿದ್ದು. ಪಶ್ಚಿಮದ ಕೆಂಪು ಸಮುದ್ರದ ಅಂಚು ಕಡಿದು, ಎತ್ತರ. ಪುರ್ವಾಭಿಮುಖವಾಗಿ ಇಳಿಜಾರು. ಟೈಗ್ರಿಸ್ ಕಣಿವೆಯಲ್ಲಿ ಇದು ಅಂತ್ಯವಾಗುತ್ತದೆ. ಈ ಪ್ರದೇಶ ಬಲು ಶುಷ್ಕ. ಇಲ್ಲಿ ನದಿಗಳಿಲ್ಲ. ಆದ್ದರಿಂದ ಬಹುತೇಕ ಅಖಂಡ. 
ಭಾರತ ಪರ್ಯಾಯದ್ವೀಪದ ದಕ್ಷಿಣದ ಪ್ರಸ್ಥಭೂಮಿಯೂ ಪಶ್ಚಿಮದಿಂದ ಪುರ್ವಕ್ಕೆ ಇಳುಕಲಾಗಿದೆ. ಇದರ ಪಶ್ಚಿಮದ ಸೆರಗೇ ಪಶ್ಚಿಮ ಘಟ್ಟ. ಪುರ್ವದಲ್ಲಿ ತಗ್ಗಾದ ಪುರ್ವಘಟ್ಟ. ಮಹಾನದಿ, ಗೋದಾವರಿ ಮುಂತಾದ ನದಿಗಳು ಅಲ್ಲಲ್ಲಿ ಈ ಪ್ರಸ್ಥಭೂಮಿಯನ್ನು ಛೇದಿಸಿವೆ.

ಮಯನ್ಮಾರ್ದಿಂದ ಪುರ್ವಕ್ಕಿರುವುದು ಇನ್ನೊಂದು ಪ್ರಸ್ಥಭೂಮಿ, ಪುರಾತನ ಶಿಲಾಶಾಖೆಯೊಂದು ಮಲಯ ಪರ್ಯಾಯದ್ವೀಪದ ವರೆಗೂ ಹಬ್ಬಿದೆ. ಈ ಪ್ರಸ್ಥಭೂಮಿಗೆ ಅಡ್ಡಲಾಗಿಯೂ ಹಲವು ನದಿಗಳಿವೆ. (ಉದಾ: ಸಾಲ್ವೀನ್, ಮೇಕಾಂಗ್, ಯಾಂಗ್ಟ್ಸಿ). 

 4. ಏಷ್ಯದ ನಾಲ್ಕನೆಯ ಮುಖ್ಯ ಭೌಗೋಳಿಕ ವಿಭಾಗವೇ ಮಹಾನದಿಗಳ ಮೈದಾನಗಳು. ಇವು ಫಲವತ್ತಾದ ತಗ್ಗುನೆಲಗಳು. ಯುಫ್ರೇಟೀಸ್ ಮತ್ತು ಟೈಗ್ರಿಸ್ ಮೈದಾನ, ಸಿಂಧೂನದೀ ಬಯಲು, ಗಂಗಾ-ಬ್ರಹ್ಮಪುತ್ರಾ ಮೈದಾನ, ಇರವಾಡಿ ಬಂiÀÄಲು, ಮೇನಾಮ್ ಮೇಕಾಂಗ್ ನದೀ ಕಣಿವೆಗಳು, ಯಾಂಗ್ಟ್ಸಿ ಕಣಿವೆ, ಹ್ವಾಂಗ್ ಹೋ ನದೀ ಪ್ರದೇಶ - ಇವು ಈ ವಿಭಾಗಕ್ಕೆ ಸೇರಿದವು.

ಏಷ್ಯದಲ್ಲಿ ಎತ್ತರವಾಗಿರುವ ಪ್ರದೇಶಗಳಿರುವಂತೆ ಅತ್ಯಂತ ಆಳವಾದ ತಗ್ಗು ಪ್ರದೇಶಗಳೂ ಜೌಗುಪ್ರದೇಶಗಳೂ ಇವೆ. ಪ್ರಪಂಚದಲ್ಲಿ ಎಲ್ಲಕ್ಕಿಂತ ಆಳವಾದ ತಗ್ಗುಪ್ರದೇಶವೆಂದರೆ ಜಾರ್ಡನ್ನಲ್ಲಿರುವ ಮೃತಸರೋವರ ಪ್ರದೇಶ. ಇದು ಮೆಡಿಟರೇನಿಯನ್ ಸಮುದ್ರ ಮಟ್ಟಕ್ಕಿಂತ 1,286ದಿ ತಗ್ಗಿನಲ್ಲಿದೆ. ಮಂಗೋಲಿಯದಲ್ಲಿನ ಅನೇಕ ಪ್ರದೇಶಗಳೂ ಕ್ಯಾಸ್ಪಿಯನ್ ಸಮುದ್ರದ ಉತ್ತರ ಹಾಗೂ ಪುರ್ವ ತೀರಗಳೂ ಇಂಥ ಇನ್ನೆರಡು ಪ್ರದೇಶಗಳೂ. ಚೀನದ ಚೆಂಘೈಯಲ್ಲಿನ ಟ್ಸೈಡಾಂ ಜೌಗುಪ್ರದೇಶ 900ದಿ ತಗ್ಗಿನಲ್ಲೂ ಟುರ್ಫಾನ್ ಓಯಸಿಸ್ 900ದಿ ಕೆಳಗೂ ಇವೆ.

 ನದಿಗಳು 
ಖಂಡದ ಹೆಚ್ಚುಭಾಗ ಸಾಮಾನ್ಯ ರೀತಿಯ ನದಿ ಹಂಚಿಕೆ ವ್ಯವಸ್ಥೆಯನ್ನು ಹೊಂದಿದ್ದರೂ ಮಧ್ಯದ ಒಳಪ್ರದೇಶ ನದಿಗಳ ಮುಖಾಂತರ ಸಾಗರದೊಂದಿಗೆ ಸಂಬಂಧ ಹೊಂದಿಲ್ಲ. ಇದು ಖಂಡದ ಹೃದಯಭಾಗ. ಇದನ್ನು ಪರ್ವತಶ್ರೇಣಿಗಳು ಸುತ್ತುವರಿದಿವೆ. ಅನೇಕ ಖಂಡಾಂತರ ಜಲಾನಯನ ಪ್ರದೇಶಗಳು ಇಲ್ಲಿವೆ. 129.4995 ಲಕ್ಷ ಚ.ಕಿಮೀ ವಿಸ್ತಾರವಾಗಿರುವ ಈ ಪ್ರದೇಶದಲ್ಲಿ ಮಳೆ ವಿರಳ. ನೀರು ಅತಿಯಾಗಿ ಆವಿಯಾಗುತ್ತದೆ. ಆದ್ದರಿಂದ ಸಾಗರಗಳನ್ನು ತಲಪುವ ಮಟ್ಟಿಗೂ ನೀರು ಒದಗಿಸಲು ನದಿಗಳಿಗೆ ಸಾಧ್ಯವಾಗಿಲ್ಲ. ಇಲ್ಲಿನ  ಒಂದು ತೊಟ್ಟು ಮಳೆ ನೀರೂ ಸಾಗರ ಸೇರುವುದಿಲ್ಲ. 

ಆಘ್ಘಾನಿಸ್ತಾನದ ಪರ್ವತಗಳಿಂದ ಹರಿದು ಬರುವ, ಕರಗಿದ ಹಿಮಜಲದಿಂದ ಕೂಡಿರುವ, ಹೆಲ್ಮಂಡ್ ನದಿ ಇರಾನಿನ ಸೈಸ್ಟಾನಿನ ಉಪ್ಪುನೀರಿನ ಸರೋವರಗಳಿಂದ ಕೂಡಿದ ಜೌಗುಪ್ರದೇಶದಲ್ಲಿ ಕಣ್ಮರೆಯಾಗುತ್ತದೆ. ಹಿಂದೂಕುಷ್ ಪರ್ವತಗಳಿಂದ ಉತ್ತರದ ಕಡೆ ಹರಿಯುವ ಆಮೂ ದಾರ್ಯಾ (2253.0816 ಕಿಮೀ) ಮತ್ತು ಸಿರ್ ದಾರ್ಯಾ (2414.016 ಕಿಮೀ)ಗಳಿಗೆ ಆರಲ್ ಸಮುದ್ರವೇ ಗುರಿ. ಪುರ್ವದ ಕಡೆ ಒಂದು ಸಾವಿರಾರು ಕಿಮೀಗಿಂತಲೂ ಹೆಚ್ಚು ದೂರ ಹರಿಯುವ ಡಾರೀಮ್ ನದಿ ಲೋಬ್ನೋರ್ ಎಂಬ ಶುಷ್ಕ ಶೂನ್ಯ ಪ್ರದೇಶದಲ್ಲಿ  ಕಣ್ಮರೆಯಾಗುತ್ತದೆ. ಇಲ್ಲಿ ನದಿಯ ಲೀನ ಬಾಲ್ಕಷ್ ಸರೋವರದಲ್ಲಿ. 

ಆದರೆ ಏಷ್ಯದ ಮಧ್ಯದಲ್ಲಿ ಹುಟ್ಟುವ ಅನೇಕ ಬೃಹತ್ ನದಿಗಳು ಸಾಗರಗಳನ್ನು ತಲುಪುತ್ತವೆ. ಈಗಿನ ಸಿಂಧು, ಗಂಗಾ, ಬ್ರಹ್ಮಪುತ್ರಾ ಮೂಲನದಿಗಳನ್ನೂ ಅವುಗಳ ಉಪನದಿಗಳನ್ನೂ ಒಳಗೊಂಡಂತೆ ಇಂಡೋ-ಬ್ರಹ್ಮ ನದಿ ಸುಮಾರು ಎರಡು ಕೋಟಿ ವರ್ಷಗಳ ಹಿಂದೆ ಹಿಮಾಲಯ ಪ್ರದೇಶಗಳಲ್ಲಿ ಹುಟ್ಟಿ 4023.36 ಕಿಮೀ ಉದ್ದದ ಕಣಿವೆಯೊಂದರಲ್ಲಿ ಬೃಹದ್ ಪ್ರಮಾಣದಲ್ಲಿ ಪ್ರವಹಿಸಿ ಅರಬ್ಬೀ ಸಮುದ್ರವನ್ನು ಸೇರುತ್ತಿತ್ತೆಂದು ಅಭಿಪ್ರಾಯಪಡಲಾಗಿದೆ (ನೋಡಿ: ಇಂಡೋ-ಬ್ರಹ್ಮ-ನದಿ). ಜಗತ್ತಿನ 12 ದೊಡ್ಡ ನದಿಗಳಲ್ಲಿ ಏಳು ಇಲ್ಲಿಯೇ ಇವೆ. ಇವುಗಳಲ್ಲಿ ಮೂರು ನದಿಗಳು (ಆಬ್, ಎನಿಸೇ, ಲೀನಾ) ಉತ್ತರದ ಕಡೆ ಹರಿದು ಆರ್ಕ್ಟಿಕ್ ಸಾಗರ ಸೇರುತ್ತವೆ. ಬೇಸಗೆಯಲ್ಲಿ ಆಬ್ ನದಿ ಇರ್ಟಿಷ್ನೊಂದಿಗೆ ಕೂಡಿ ಪಾತ್ರವನ್ನು ಮೀರಿ ದಡಗಳಲ್ಲಿ ಹರಿದು 258.990ಚಕಿಮೀ ಅಭೇದ್ಯ ಜೌಗುಪ್ರದೇಶ ನಿರ್ಮಿಸುತ್ತದೆ. 

ಎನಿಸೇ (4506.1632 ಕಿಮೀ) ಮತ್ತು ಲೀನಾ (4828.032 ಕಿಮೀ) ಕೆಲವು ಕಡೆ 32 ಕಿಮೀಗಳಷ್ಟು ಅಗಲವಾಗಿವೆ. ಯಾನ, ಇಂಡಿಗರ್ಕಾ ಮತ್ತು ಕೊಲಿಮಗಳು-ಇಲ್ಲಿನ ಚಿಕ್ಕ ನದಿಗಳು. ಇವೆಲ್ಲವೂ ಚಳಿಗಾಲದಲ್ಲಿ (ಹೆಚ್ಚಾಗಿ ಉತ್ತರಾರ್ಧ ಭಾಗಗಳು) ಹೆಪ್ಪುಗಟ್ಟುತ್ತವೆ. ಪೆಸಿಫಿಕ್ ಸಾಗರವನ್ನು ಸೇರುವ ಹಾಗೂ ಪುರ್ವದ ಕಡೆ ಹರಿಯುವ ನದಿಗಳಲ್ಲಿ ಆಮೂರ್ (2864.63232 ಕಿಮೀ ಉದ್ದ) ಹ್ವಾಂಗ್ಹೋ (4345.2288 ಕಿಮೀ ಉದ್ದ) ಯಾಂಗ್ಟ್ಸೀ (4988.9664 ಕಿಮೀ ಉದ್ದ ಮತ್ತು ಮೇಕಾಂಗ್ (4184.2944 ಕಿಮೀ ಉದ್ದ) ಮುಖ್ಯವಾದವು. ಆಮೂರ್ ನದಿ ಮಂಚೂರಿಯದ ಉತ್ತರದ ಅಂಚಿನಲ್ಲಿ ಹರಿದು, ಉತ್ತರದ ಕಡೆ ತಿರುಗಿ ಓಕಾಟ್ಸ್‌್ಕ ಸಮುದ್ರ ಸೇರುತ್ತದೆ. ಹ್ವಾಂಗ್ ಹೋ ಅತ್ಯಂತ ನಿರ್ದಯಿ ನದಿ. ಚೀನರ ಕಣ್ಣೀರು ಎಂದು ಇದರ ನಾಮಧೇಯ. 

ಯಾಂಗ್ಟ್ಸೀ ಕಿಯಾಂಗ್ ಕಡಿದಾದ ಬೆಟ್ಟಗಳಿಂದ ಹರಿದು ಬಂದು ಚೀನವನ್ನು ಉತ್ತರ-ದಕ್ಷಿಣಾರ್ಧಗಳನ್ನಾಗಿ ಮಾಡಿ, ಪೆಸಿಫಿಕ್ ಸಾಗರ ಸೇರುತ್ತದೆ. ಯುವಾನ್, ಮಿನಾಂ, ಸಿಯಾಂಗ್, ಮಿನ್ ಹ್ವಾಯಿ, ಹಾಯಿ, ಲಿಆವೊ-ಇಲ್ಲಿನ ಚಿಕ್ಕ ನದಿಗಳು.

ಆಗ್ನೇಯ ಏಷ್ಯದಲ್ಲಿನ ಮೇಕಾಂಗ್, ಇರವಾಡಿ, ಸಾಲವೀನ್ (2816.352 ಕಿಮೀ) ನದಿಗಳು ಒಂದಕ್ಕೊಂದು ಸಮಾನಾಂತರವಾಗಿ, ಉತ್ತರ-ದಕ್ಷಿಣವಾಗಿ ಹರಿಯುತ್ತವೆ. 

ಹಿಂದೂ ಸಾಗರವನ್ನು ಸೇರುವ ನದಿಗಳಲ್ಲಿ ಸಿಂಧೂ (2735.8848 ಕಿಮೀ) ಗಂಗಾ (2494.4832 ಕಿಮೀ) ಮುಖ್ಯ. ಟಿಬೆಟ್ಟಿನಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಹರಿಯುವ ಬ್ರಹ್ಮಪುತ್ರಾ ನದಿ ಬಂಗಾಲ ಕೊಲ್ಲಿ ಸೇರುವುದಕ್ಕೆ ಮುಂಚೆ ಹಿಮಾಲಯಗಳಿಂದ ಹರಿದು ಬರುವ ಗಂಗಾ ನದಿಯನ್ನು ಕೂಡಿ, ಪ್ರಪಂಚದಲ್ಲಿ ಅತ್ಯಂತ ವಿಶಾಲ ಮುಖಜಭೂಮಿಯನ್ನು ನಿರ್ಮಾಣಮಾಡಿದೆ. ಸಿಂಧೂನದಿ ಹಿಮಾಲಯ ಪರ್ವತಗಳಲ್ಲಿ ಜನಿಸಿ, ಉಪ-ನದಿಗಳೊಂದಿಗೆ ಕೂಡಿ ಅರಬ್ಬೀ ಸಮುದ್ರ ಸೇರುತ್ತದೆ. ಸಾಲ್ವೀನ್, ಸಿಟ್ಟಾಂಗ್, ಇರವಾಡಿ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ನರ್ಮದಾ, ತಪತಿ-ಇಲ್ಲಿನ ಇತರ ನದಿಗಳು. ಅತ್ಯಂತ ಪಶ್ಚಿಮದಲ್ಲಿರುವ ಯುಫ್ರೇಟೀಸಿನ ಉದ್ದ 2735.8848 ಕಿಮೀ ಇದು ಟೈಗ್ರಿಸಿನೊಂದಿಗೆ (1770.2784 ಕಿಮೀ) ಕೂಡಿ ಪರ್ಷಿಯ ಕೊಲ್ಲಿ ಸೇರುತ್ತದೆ.

 ಸರೋವರಗಳು  
ಅತಿಯಾದ ತೇವದಿಂದ ಕೂಡಿದ್ದ ಪ್ರಾರಂಭಿಕ ಯುಗದಲ್ಲಿ ಆರಲ್ ಸಮುದ್ರ ವಿಸ್ತಾರವಾಗಿ, ವಿಶಾಲವಾದ ಕ್ಯಾಸ್ಪಿಯನ್ ಸಮುದ್ರದವರೆಗೂ ಹರಡಿದ್ದು ಅಲ್ಲಿಂದ ಮುಂದೆ ಕಪ್ಪು ಸಮುದ್ರದವರೆಗೂ ತನ್ನ ಕೈಚಾಚಿತ್ತು. ಕಪ್ಪು ಸಮುದ್ರವೇ ಪ್ರಪಂಚದ ಅತ್ಯಂತ ದೊಡ್ಡ ನಡುಗಡಲು (271174.464 ಚ.ಕಿಮೀ) ಆರಲ್ ಸಮುದ್ರದ ವಿಸ್ತೀರ್ಣ 67339.74 ಚ.ಕಿಮೀ ಬಾಲ್ಕಾಷ್ (17352.933 ಚ.ಕಿಮೀ) ಮತ್ತು ಇಸ್ಸಿಕ್ ಕಲ್ (5697.978 ಚ.ಕಿಮೀ) - ಇವೂ ಪ್ರಪಂಚದ ಪ್ರಮುಖ ಸರೋವರಗಳಲ್ಲಿ ಸೇರಿವೆ. ದಕ್ಷಿಣ ಸೈಬೀರಿಯದಲ್ಲಿರುವ ಬೇಕಲ್ ಸರೋವರ (31494.2784 ಚ.ಕಿಮೀ) ಪ್ರಪಂಚದ ಅತಿ ವಿಶಾಲವಾದ ಸಿಹಿನೀರಿನ ಸರೋವರ. ಸರಾಸರಿ 6,360' (ಒಂದು ಮೈಲಿ) ಆಳವಾಗಿರುವುದರಿಂದ ಬೃಹತ್ ಪ್ರಮಾಣದ ನೀರು ಇದರಲ್ಲಿದ್ದು ಇತರ ವಿಶಾಲ ಸರೋವರಗಳಿಗಿಂತಲೂ ಇದು ಹೆಚ್ಚು ನೀರನ್ನು ಹೊಂದಿದೆ. 

ಟಿಬೆಟ್ ಮತ್ತು ತುರ್ಕಿಗಳಲ್ಲಿ ಅನೇಕ ಉಪ್ಪು ನೀರಿನ ಸರೋವರಗಳಿವೆ. ತುರ್ಕಿಯಲ್ಲಿನವಾನ್ ಮತ್ತು ಇರಾನಿನಲ್ಲಿನ ಉರ್ಮಿಯಾ ಸರೋವರಗಳು. ಖನಿಜ ಭರಿತ ಜಲದಿಂದ ಕೂಡಿವೆ. ಚೀನದಲ್ಲಿ ಟುಂಗ್ ಟಿಂಗ್ ಎಂಬುದು ಒಂದು ಮುಖ್ಯ ಸರೋವರ. ಇದರ ವಿಸ್ತಾರ ಯಾಂಗ್ಟ್ಸಿ ನದಿಯ ನೀರಿನ ಪ್ರಮಾಣಕ್ಕೆ ತಕ್ಕಂತೆ ಬದಲಾವಣೆಯಾಗುತ್ತ ಹೋಗುತ್ತದೆ. ಉತ್ತರ ಚೀನದಲ್ಲಿ ಕೊಕೊ-ನೋರ್ (5956.977 ಚ.ಕಿಮೀ) ಉಪ್ಪು ನೀರಿನ ಸರೋವರ. 

 ವಾಯುಗುಣ  
ಖಂಡದ ಅಸಾಧ್ಯ ವಿಸ್ತಾರ, ನಿಬಿಡತೆ, ಅಕ್ಷಾಂಶಗಳ ವ್ಯತ್ಯಾಸ, ಭೂಮಿಯ ಮೇಲ್ಮೈ ಇವು ಅನೇಕ ವಾಯುಗುಣವೈಲಕ್ಷಣ್ಯಗಳನ್ನು ನಿರ್ಮಿಸಿವೆ. ಖಂಡದ ಹೆಚ್ಚು ಭಾಗ ಸಮುದ್ರಕ್ಕೆ ಬಲು ದೂರದಲ್ಲಿರುವುದರಿಂದ ಸೆಕೆ ಮತ್ತು ಚಳಿಗಳ ಅತಿರೇಕಗಳನ್ನೊಳಗೊಂಡ ಖಂಡಾಂತರ ವಾಯುಗುಣವನ್ನು ಕಾಣಬಹುದು. ಅಲ್ಲದೆ ಬೇರೆ ಯಾವ ಖಂಡದಲ್ಲೂ ಪರ್ವತಶ್ರೇಣಿಗಳು ವಾಯುಗುಣದ ಮೇಲೆ ಇಲ್ಲಿಯಷ್ಟು ಪ್ರಭಾವ ಬೀರುವುದಿಲ್ಲ. ಉತ್ತರದಿಂದ ಬರುವ ಶೀತಪ್ರಭಾವಗಳನ್ನು ಮತ್ತು ದಕ್ಷಿಣದಿಂದ ಬರುವ ಉಷ್ಣತೆಯ ಪ್ರಭಾವ ಹಾಗೂ ಜಲಮಾರುತಗಳನ್ನು ಇವು ತಡೆಗಟ್ಟುತ್ತವೆ.

ಜನವರಿಯ ಉಷ್ಣತೆ ದಕ್ಷಿಣದಿಂದ ಉತ್ತರದ ಕಡೆಗೆ ಹೋದಂತೆ ಕಡಿಮೆಯಾಗುತ್ತದೆ. ಸಮತಾಪರೇಖೆಗಳು ಸಾಮಾನ್ಯವಾಗಿ ಪುರ್ವ ಪಶ್ಚಿಮವಾಗಿದೆ. ಮಧ್ಯ ಮತ್ತು ಉತ್ತರ ಏಷ್ಯಗಳಲ್ಲಿನ ಉಷ್ಣತೆ 00 ಫ್ಯಾ. ಗಿಂತಲೂ ಕಡಿಮೆ. ಸೈಬೀರಿಯದಲ್ಲಿ ಚಳಿ ವಿಪರೀತ. ಲೀನಾ ನದೀ ತೀರದಲ್ಲಿನ ಸರಾಸರಿ ಉಷ್ಣತೆ ವರ್ಷಪುರ್ತಿ ಸೊನ್ನೆಗಿಂತ 10 ಫ್ಯಾ. ಮೇಲಿರುತ್ತದೆ. ಹಿಮ ಹೂಳುಗಳ ನಾನಾ ಪದರಗಳಿಂದ ನಿರ್ಮಾಣವಾಗಿರುವ ದೊಡ್ಡ ದ್ವೀಪಗಳು ಬೆಚ್ಚನೆಯ ಹವೆಯಲ್ಲಿ ಕರಗಿ ಹೋಗುತ್ತವೆ. ಲೀನಾ ನದಿ ವರ್ಷದಲ್ಲಿ ಎರಡು ತಿಂಗಳು ಮಾತ್ರ. ಹಿಮದ 
ಕಾಟದಿಂದ ದೂರವಿದ್ದರೂ ಇದಕ್ಕೆ ಹೊಂದಿಕೊಂಡಿರುವ ಉಪನದಿಗಳೂ ಮತ್ತಿತರ ಜಲವಿಭಾಗಗಳೂ ವರ್ಷಾಂತರಗಳಿಂದ ಹೆಪ್ಪುಗಟ್ಟಿವೆ. ಇಷ್ಟಾದರೂ ಅತ್ಯಂತ ಚಳಿಪ್ರದೇಶ ಮೇರುವಿನ ಬಳಿ ಇಲ್ಲ. ಯಾನಾ ನದಿಯ ಕಂದರದಲ್ಲಿರುವ ವರ್ಕೊಯಾನ್ಸ್‌್ಕ ಅತ್ಯಂತ ಚಳಿಪ್ರದೇಶವಾಗಿದೆ.

ಬೇಕಲ್ ಸರೋವರದ ಬಳಿ 30.5" ಒತ್ತಡ ನಿರ್ಮಾಣವಾಗಿ ಏಕಪ್ರಕಾರವಾಗಿ ಮುಂದುವರಿದು ಉತ್ತರದ ಬೆಟ್ಟಗಳವರೆಗೂ ಹರಡುತ್ತದೆ. ಇದನ್ನು ಆರ್ಕ್ಟಿಕ್ನ ಕಡಲ್ಗಾಳಿಗಳು ಹಿಂದಕ್ಕೆ ತಳ್ಳುತ್ತವೆ. ಬ್ಯೂರಾನ್ (ಪುರ್ಗಾ) ಅಥವಾ ಬ್ಯೂರ್ ಘಾಸ್ ಚಂಡಮಾರುತ ಅತ್ಯಂತ ಭಯಾನಕ.

ಮಾರ್ಕೊಯಾನ್ಸ್‌್ಕನಲ್ಲಿನ ಜುಲೈ ಉಷ್ಣತೆ ಸ್ಯಾನ್ ಫ್ರಾನ್ಸಿಸ್ಕೊವಿನದಕ್ಕಿಂತಲೂ ಹೆಚ್ಚು. ಹೀಗಾಗಿ ಖಂಡದ ಹೆಚ್ಚುಭಾಗ ಜನವರಿಯಲ್ಲಿ ಹೆಚ್ಚು ಒತ್ತಡದ ಪ್ರದೇಶವಾಗಿರುತ್ತದೆ.

ಇದಕ್ಕೆ ಪ್ರತಿಯಾಗಿ ನೈಋತ್ಯ ಏಷ್ಯ ಅತ್ಯುಷ್ಣಪ್ರದೇಶ. ಅರೇಬಿಯದ ಒಳಭಾಗದಲ್ಲಿ ವಾರ್ಷಿಕ ಆವಿಯಾಗುವಿಕೆ ಸುಮಾರು 160". ಇದರ ಪರಿಣಾಮವಾಗಿ ನೆಲ ಸೋಕುವುದಕ್ಕೆ ಮೊದಲೇ ಮಳೆ ಹಾಗೆಯೇ ಆವಿಯಾಗುವುದೂ ಉಂಟು. ಬಿಸಿಲಿಗೆ ನೇರವಾಗಿರುವ ಶಿಲೆಗಳು ಒಡೆದು ಸಿಡಿಯುತ್ತವೆ. ಮರಳು ನೀರಿನ ಕುದಿಯುವ ಉಷ್ಣತೆ ಪಡೆಯುವುದರಿಂದ ಇಲ್ಲಿ ಸಾಮಾನ್ಯವಾಗಿ ದಿನದಲ್ಲಿ ಪ್ರಯಾಣಮಾಡುವುದನ್ನು ತಪ್ಪಿಸಿ, ರಾತ್ರಿಯ ಹೊತ್ತು ಒಂಟೆಗಳ ಮೇಲೆ ನಕ್ಷತ್ರ ಮಾರ್ಗದರ್ಶನದಲ್ಲಿ ಪ್ರಯಾಣ ಮಾಡುವುದು ರೂಢಿ. ಪರ್ಷಿಯನ್ ಕೊಲ್ಲಿಯಲ್ಲಿನ ನೀರು ಅತ್ಯುಷ್ಣ. ಇಲ್ಲಿನ ಉಷ್ಣತೆ 960 ಫ್ಯಾ. ತೀರಗಳಲ್ಲಿ ಕೆಲವು ಸಲ 1200 ಫ್ಯಾ. ಇರುತ್ತದೆ. ಭಾರತದ ಥಾರ್ ಮರುಭೂಮಿಯ ಪ್ರದೇಶಗಳಲ್ಲಿ ಹೊಪ್ಪಳೆಗಳೇಳುವ ಉಷ್ಣತೆಯಿಂದ ಚಂಗೇಸ್ಖಾನನ ಬಲಿಷ್ಠ ಸೈನ್ಯವೇ ಹೆದರಿತೆಂದು ಹೇಳಲಾಗಿದೆ. ಜುಲೈ ತಿಂಗಳಲ್ಲಿ ಮರುಭೂಮಿ ಪ್ರದೇಶಗಳೆಲ್ಲ ಅತ್ಯಂತ ಕಡಿಮೆ ಒತ್ತಡ ಪ್ರದೇಶಗಳಾಗುತ್ತವೆ.
ಅರಬ್ಬೀ ಸಮುದ್ರ ಮತ್ತು ಬಂಗಾಲ ಕೊಲ್ಲಿಗಳು ಮಾನ್ಸೂನ್ ಮಾರುತಗಳ ಕೇಂದ್ರಗಳು, ಪುರ್ವಚೀನ ಸಮುದ್ರದಲ್ಲೂ ಇದೇ ರೀತಿಯ ಮಾನ್ಸೂನ್ ಮಾರುತಗಳ ಕೇಂದ್ರವಿದೆ. ಅನೇಕ ಪ್ರದೇಶಗಳು ಮಾರುತಗಳ ಶಾಪಕ್ಕೆ ಬಲಿಯಾಗಿವೆಯೆನ್ನಬಹುದು. ವಿಶಾಲ ಪ್ರದೇಶವಾದ ಗೋಬಿ ಮರುಭೂಮಿಯಲ್ಲಿನ ಕರಬುರಾನ್ ಮಾರುತಗಳು ತುರ್ಕಿಯ ಮರುಭೂಮಿ ಹಾಗೂ ಸ್ಟೆಪ್ಗಳ ಮೂಲಕ ಹಾದು, ಅಲ್ಲಲ್ಲಿರುವ ಸರೋವರಗಳ ಮತ್ತು ನದಿಗಳ ನೀರಿನ ತೇವ ಪಡೆದು ಕ್ಯಾಸ್ಪಿಯನ್ ಸಮುದ್ರದ ಮುಖಾಂತರ ಹಾದುಹೋಗುತ್ತವೆ. ಇವು ವಿಶಾಲವಾದ ಮಳೆ ನೆರಳಿನ ಮರುಭೂಮಿಯಿಂದ ಬರುತ್ತವೆ.

ಇರಾನಿನ ಕೆಲವು ಪ್ರದೇಶಗಳಲ್ಲಿ ಸೈಸ್ಟಾನ್ ಎಂಬ 120 ದಿನಗಳ ಮಾರುತಗಳು ಗಂಟೆಗೆ 112.65408 ಕಿಮೀ ವೇಗದಲ್ಲಿ ಬೀಸುತ್ತವೆ. ಕೆಲವು ಸಮಯದಲ್ಲಿ ಬಿರುಗಾಳಿ ಇನ್ನೂ ಪ್ರಕೋಪ ಹೊಂದಿ ಗಂಟೆಗೆ 193.12128 ಕಿಮೀಗಿಂತಲೂ ಹೆಚ್ಚು ವೇಗವಾಗಿ ಬೀಸುವುದುಂಟು. 

ತುರ್ಕಿಯ ಕಡೆಯಿಂದ ಪರ್ಷಿಯನ್ ಕೊಲ್ಲಿಯ ಕಡೆ ಇದೇ ರೀತಿ ಬೀಸುವುದು ಷಾಮಲ್ ಮಾರುತ.

ಟಿಬೆಟ್ ಇತ್ಯಾದಿ ಎತ್ತರದ ಪ್ರದೇಶಗಳು ಅತ್ಯುಷ್ಣತೆಯ ಕಾಟವನ್ನೇನೊ ತಪ್ಪಿಸಿಕೊಳ್ಳುತ್ತವೆ. ಆದರೆ ಶುಷ್ಕ ಮಾರುತಗಳು ಉತ್ತರದ ಕಡೆಯಿಂದ ಬೀಸುವುದರಿಂದ ಪರಿಸ್ಥಿತಿ ಅಸಹನೀಯ.
ಭಯಾನಕ ಹೊಯ್ಗಾಳಿಗಳು ಅರೇಬಿಯ ಮರುಭೂಮಿಯಿಂದ ಬೀಸಿ ದೂರದಲ್ಲಿ ಸಮುದ್ರದಲ್ಲಿರುವ ಹಡಗುಗಳನ್ನು ಮರಳಿನಿಂದ ಬಡಿಯುವುದುಂಟು. ಉತ್ತರ ಚೀನದಲ್ಲಿ ಇಂಥ ಮಾರುತಗಳ ಪ್ರಭಾವ ಅಧಿಕ. ಅಲ್ಲಿನ ಧೂಳು ಮಧ್ಯ ಏಷ್ಯದಲ್ಲಿ ವಿಸ್ತರಿಸಿ ನೂರಾರು ಕಿಮೀ ಅಗಲ, ಸಾವಿರಾರು ಅಡಿಗಳ ಆಳ ಸಂಚಿತವಾಗಿರುತ್ತದೆ. 

ಹಿಂದೂ ಸಾಗರದಲ್ಲಿನ ಮಾನ್ಸೂನ್ ಮಾರುತಗಳ ಪ್ರಭಾವವನ್ನು ದಕ್ಷಿಣ ಏಷ್ಯದಲ್ಲೆಲ್ಲ ಕಾಣಬಹುದು. ಇವು ಈಶಾನ್ಯದಿಂದ ಆರು ತಿಂಗಳ ಕಾಲ ಬೀಸಿ, ಆಮೇಲೆ ನೈಋತ್ಯದಿಂದ ಬೀಸುತ್ತವೆ. ಪುರ್ವಕ್ಕೆ ಹೋದಂತೆ ಅವುಗಳ ಪಥವೂ ಕಾಲಾವಧಿಯೂ ವ್ಯತ್ಯಾಸಗೊಳ್ಳುವವು. 

ಜೂನಿನಿಂದ ಸೆಪ್ಟೆಂಬರ್ವರೆಗೆ ಬೀಸುವ ಈ ಮಾರುತಗಳು ಮಳೆಯನ್ನು ತರದಿದ್ದರೆ ಕೋಟ್ಯಂತರ ಜನ ಕ್ಷಾಮಕ್ಕೆ ಬಲಿಯಾಗುತ್ತಾರೆ. ದಕ್ಷಿಣ ಚೀನ ಮತ್ತು ಜಪಾನ್ ತೀರದಲ್ಲಿ ಬೀಸುವ ಕಡಲ್ಗಾಳಿಗಳು ಅಪಾಯಕಾರಿ. 

ಏಷ್ಯದಲ್ಲಿ ಮಳೆ ಹಂಚಿಕೆ ಬಲು ಅಸಮವಾದದ್ದು. ಸೈಬೀರಿಯದಲ್ಲಿ ವಾರ್ಷಿಕ ಮಳೆ 20" ಗಳಿಗಿಂತಲೂ ಕಡಿಮೆ. ಆದರೆ ಜಗತ್ತಿನಲ್ಲೆ ಅತ್ಯಂತ ಹೆಚ್ಚಿನ ಮಳೆ ಬೀಳುವ ಪ್ರದೇಶ ಅಸ್ಸಾಮಿನಲ್ಲಿದೆ. ಚಿರಾಪುಂಜಿಯಲ್ಲಿ ವಾರ್ಷಿಕ ಸರಾಸರಿ ಮಳೆ 424". 24 ಗಂಟೆಗಳಲ್ಲಿ 36" ಕ್ಕೂ ಹೆಚ್ಚು ಮಳೆ ಬೀಳುವುದುಂಟು. ಆದರೆ ಮಳೆ ಹಂಚಿಕೆ ವರ್ಷಪುರ್ತಿ ಅಸಮರ್ಪಕ. ಇಲ್ಲಿನ ಒಟ್ಟು ಮಳೆ ಐದು ತಿಂಗಳಲ್ಲಿ ಮಾತ್ರ ಬೀಳುತ್ತದೆ; ವರ್ಷದ ಉಳಿದ ತಿಂಗಳುಗಳಲ್ಲಿ ಸಾಮಾನ್ಯವಾಗಿ ಮಳೆ ಇಲ್ಲ.

ದಕ್ಷಿಣ ಚೀನ, ಮಯನ್ಮಾರ್, ಇಂಡೋ-ಚೀನ, ಶ್ರೀಲಂಕ-ಮಲಯ, ಇವು ಅಧಿಕ ಮಳೆಯ ಪ್ರದೇಶಗಳು. ಫಾರ್ಮೋಸದ ಕೆಲವು ಕಡೆಗಳಲ್ಲಿ 300" ಗಳಷ್ಟು ಮಳೆಯಾಗುವುದುಂಟು. ಉಜಾನ್ನಲ್ಲಿ ಇದು ಇನ್ನೂ ಹೆಚ್ಚು. ಮಲಯದಲ್ಲಿ ಒಂದು ಗಂಟೆಯಲ್ಲಿ ಧಾರಾಕಾರ ಮಳೆ;  ಮರುಗಳಿಗೆಯಲ್ಲೆ ಅಸಾಧ್ಯ ಒಣಹವೆ. ವೆರ್ಖೋಯಾನ್ಸ್ಕ್‌ನಲ್ಲಿ ವಾರ್ಷಿಕ ಉಷ್ಣತೆಯ ವ್ಯತ್ಯಾಸ ತೀವ್ರ; ಮಲಯದಲ್ಲಿ 10º. 

ಏಷ್ಯದ ಮುಖ್ಯ ವಾಯುಗುಣಗಳಿವು: 
  1. ಉಷ್ಣವಲಯದ ಮಾನ್ಸೂನ್ ವಾಯುಗುಣ ಭಾರತ, ಪಾಕಿಸ್ತಾನ, ಇಂಡೋ-ಚೀನ, ದಕ್ಷಿಣ ಚೀನಗಳಲ್ಲಿ.
  2. ಭೂಮಧ್ಯರೇಖೆಯ ವಾಯುಗುಣ: ಮಲಯ, ಇಂಡೋನೇಷ್ಯಗಳಲ್ಲಿ, ಇದು ಅಕ್ಷಾಂಶ ಹಾಗೂ ಸಾಗರಿಕ ಪ್ರಭಾವಗಳಿಗೆ ತಕ್ಕಂತೆ ಬದಲಾಗುವುದುಂಟು. ಉಷ್ಣತೆ ಸಾಮಾನ್ಯವಾಗಿ ಹೆಚ್ಚು. ವರ್ಷಪುರ್ತಿ ಮಳೆ. ಆದರೆ ಮೇ-ಅಕ್ಟೋಬರ್ ಅವಧಿಯಲ್ಲಿ ಅತ್ಯಂತ ಹೆಚ್ಚು. ಮಳೆ.  ಡಿಸೆಂಬರ್-ಜನವರಿಗಳು ಸಾಮಾನ್ಯವಾಗಿ ಶುಷ್ಕ.
 3. ಸಮಶೀತೋಷ್ಣ ಮಾನ್ಸೂನ್ ವಾಯುಗುಣ: ಮಧ್ಯ ಮತ್ತು ಉತ್ತರ ಚೀನ, ಮಂಚೂರಿಯ, ಮಧ್ಯ ಮತ್ತು ದಕ್ಷಿಣ ಜಪಾನ್ಗಳನ್ನೊಳಗೊಂಡ ಈಶಾನ್ಯ ಏಷ್ಯ.
 4. ಮರುಭೂಮಿ ಮತ್ತು ಶುಷ್ಕ ಮರುಭೂಮಿ ವಾಯುಗುಣ: ಮಾನ್ಸೂನ್ ಪ್ರದೇಶದ ವಾಯವ್ಯಕ್ಕೆ ಅರೇಬಿಯದಿಂದ ಇರಾನ್ ತುರ್ಕಿಸ್ತಾನಗಳ ಮುಖಾಂತರ ಗೋಬಿ ಮರುಭೂಮಿಯ ಅಂಚಿನ ವರೆಗೆ. ಇಲ್ಲಿ ಮಳೆ ಇಲ್ಲ. ಬೆಳೆಯೂ ಇಲ್ಲ. ಇರಾನ್ವರೆಗಿನ ಪ್ರದೇಶದಲ್ಲಿ ಉಷ್ಣವಲಯ ವಾಯುಗುಣ, ಉಳಿದ ಕಡೆಗಳಲ್ಲಿ ಸಮಶೀತೋಷ್ಣವಲಯ ವಾಯುಗುಣ.
 5. ಮೆಡಿಟರೇನಿಯನ್ ಸಮುದ್ರ ವಾಯುಗುಣ: ಮರುಭೂಮಿ ವಾಯುಗುಣ ಪ್ರದೇಶದ ವಾಯವ್ಯಕ್ಕೆ, ಮೆಡಿಟರೇನಿಯನ್ ಸಮುದ್ರದ ಅಂಚಿನಲ್ಲಿ, ಮತ್ತು ತುರ್ಕಿ, ಸಿರಿಯ, ಇಸ್ರೇಲ್, ಜಾರ್ಡನ್ಗಳಲ್ಲಿದೆ. ಉಷ್ಣತೆಯ ಒಣ ಬೇಸಿಗೆಗಳೂ ಮಳೆಯಿಂದ ಕೂಡಿದ ಚಳಿಗಾಲಗಳೂ ಈ ವಾಯುಗುಣದ ವೈಶಿಷ್ಟ್ಯ. ಇದರ ಪ್ರಭಾವವನ್ನು ಇರಾನ್ ಪ್ರಸ್ಥಭೂಮಿಯವರೆಗೂ ಕಾಣಬಹುದು.
 6. ತಂಡ್ರ ವಾಯುಗುಣ: ಇದು ಉತ್ತರದ ಅಂಚಿನಲ್ಲಿದೆ.
 7. ಶೀತ ಹಿತೋಷ್ಣ (ಕೋಲ್ಡ್‌ ಟೆಂಪರೇಟ್) ವಾಯುಗುಣ: ಸೈಬೀರಿಯದ ಹೆಚ್ಚು ಪ್ರದೇಶಗಳಲ್ಲಿ.

 ಸ್ವಾಭಾವಿಕ ಸಸ್ಯವರ್ಗ 
ಏಷ್ಯದ ಸಸ್ಯವರ್ಗ ಅಲ್ಲಿನ ವಾಯುಗುಣ ಭೂಗುಣಗಳಿಗೆ ಅನುಸಾರವಾದದ್ದು. ಉಷ್ಣತೆಯೂ ತೇವವೂ ಇದನ್ನು ತೀರ್ಮಾನಿಸುತ್ತವೆ. ಉತ್ತರದಲ್ಲಿ ಚಟುವಟಿಕೆಯ ಸಸ್ಯ ಬೆಳೆವಣಿಗೆ ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ; ಆಗ್ನೇಯದಲ್ಲಿ ವರ್ಷಪೂರ್ತಿ ಸಸ್ಯ ಬೆಳೆವಣಿಗೆಯಾಗುತ್ತದೆ.

ಖಂಡದ ಉತ್ತರದ ಅಂಚಿನಲ್ಲಿ ಆರ್ಕ್ಟಿಕ್ ತೀರದುದ್ದಕ್ಕೂ ತಂಡ್ರ ಸಸ್ಯವರ್ಗ. ಸಾವಿರಾರು ಕಿಮೀಗಳ ವಿಸ್ತಾರದ ಒಳಮಣ್ಣು ಶಾಶ್ವತವಾಗಿ ನೂರಾರು ಮೀಗಳವರೆಗೆ ಹೆಪ್ಪುಗಟ್ಟಿರುತ್ತದೆ. ಬೇಸಗೆ ಬಲು ಕಡಿಮೆಯಾದ್ದರಿಂದ ಶಾಶ್ವತ ಸಸ್ಯವರ್ಗವಿಲ್ಲ. ಹಾವಸೆಗಳು ಜೌಗು ಪ್ರದೇಶಗಳಿಗೆ ಕಚ್ಚಿಕೊಂಡಿರುತ್ತವೆ. ನೀರು ಹಬ್ಬೆಗಿಡಗಳು ಬಿಳಲುಗಳಂತೆ ಅಲ್ಲಲ್ಲಿ ಇಳಿ ಬಿದ್ದಿರುವುದುಂಟು. ಆಸ್ಟ್‌ ಮತ್ತು ಭೂರ್ಜು ಸಸಿಗಳು ನೆಲದ ಮೇಲೆ ಕೆಲವು ಅಂಗುಲಗಳವರೆಗೆ ಕಾಣಿಸಿಕೊಳ್ಳುತ್ತವೆ. ತಗ್ಗು ಪ್ರದೇಶಗಳಲ್ಲಿ ತಂಡ್ರ ಸಸ್ಯವರ್ಗದೊಂದಿಗೆ ಚಿಕ್ಕ ಮರಗಳೂ ಬೆರೆತಿರುವುದುಂಟು.

ತಂಡ್ರದ ದಕ್ಷಿಣದಲ್ಲಿ ಖಂಡದ ಅಗಲಕ್ಕೂ ಪ್ರಪಂಚದಲ್ಲೆಲ್ಲ ಅತ್ಯಂತ ವಿಶಾಲವಾದ ಕಾಡುಗಳು ಕಂಡು ಬರುತ್ತವೆ. ಇವನ್ನು ಸೈಬೀರಿಯನ್ ಟೈಗ ಎಂದು ಕರೆಯುತ್ತಾರೆ. ಉತ್ತರ ಯುರೋಪಿನಿಂದ ಉತ್ತರ ಏಷ್ಯದ ಮುಖಾಂತರ ಪೆಸಿಫಿಕ್ವರೆಗೆ ಇವು ಹರಡಿವೆ. ಪೈನ್, ಲಾರ್ಚ್, ಸ್ಪ್ರೂಸ್, ಫರ್ ಇತ್ಯಾದಿ ಮರಗಳೊಂದಿಗೆ ಭೂರ್ಜು ಹಾಗೂ ಆಸ್ಪ್‌ಮರಗಳೂ ಮಿಶ್ರವಾಗಿವೆ. ಅಲ್ಲಲ್ಲಿ ಜೌಗುಪ್ರದೇಶಗಳೂ ಉಂಟು. 

ಇವುಗಳ ದಕ್ಷಿಣಕ್ಕೆ ಹಾಗೂ ಆಗ್ನೇಯದಲ್ಲಿ ಚಳಿಗಾಲದಲ್ಲಿ ಎಲೆಗಳುದುರುವ, ಅಗಲವಾದ ಎಲೆಗಳುಳ್ಳ ಮರಗಳ ಕಾಡುಗಳು ಕಂಡುಬರುತ್ತವೆ. ಈಶಾನ್ಯ ಏಷ್ಯದಲ್ಲಿರುವವು ತಣ್ಣಗಿನ ಸಮಶೀತೋಷ್ಣವಲಯ ಕಾಡುಗಳು. ಎತ್ತರದ ಪ್ರದೇಶಗಳಲ್ಲಿ ಮೊನಚಾದ ಎಲೆಗಳ ಮರಗಳುಂಟು. ಓಕ್, ಬೀಚ್, ಮತ್ತು ಕರ್ಪುರ ಮರಗಳು ಇಲ್ಲಿ ಮುಖ್ಯ. ಉತ್ತರದಲ್ಲಿರುವವು ಕೊಡೆ ರೀತಿಯ ಮರಗಳು.

ಪೂರ್ವ ಏಷ್ಯದ ಉತ್ತರ ಭಾಗದಲ್ಲಿ ಓಕ್, ಎಲ್ಮ್‌ ಇತ್ಯಾದಿಮರಗಳ ಕಾಡುಗಳಿವೆ. ಕೊರಿಯದಲ್ಲಿ ಗಟ್ಟಿಮುಟ್ಟಾದ ಬಿದಿರು ದೊರೆಯುತ್ತದೆ. ಮಧ್ಯ ಚೀನ ಮತ್ತು ಜಪಾನ್ ಗಳಲ್ಲಿ ಬೆಚ್ಚಗಿರುವ ಸಮಶಿತೋಷ್ಣವಲಯ ಕಾಡುಗಳುಂಟು. ಭೂತಾಕಾರದ ರೆಡ್ವುಡ್ ಮರಗಳು ಇಲ್ಲಿವೆ. 

ಚೀನದಲ್ಲೂ ಕಾಡುಗಳನ್ನು ಕಾಣಬಹುದು. ದಕ್ಷಿಣ ಚೀನದಲ್ಲಿ ಸವನ್ನವುಂಟು. ಆಗ್ನೇಯ ಮತ್ತು ದಕ್ಷಿಣ ಏಷ್ಯದಲ್ಲಿ ಉಷ್ಣವಲಯ ಕಾಡುಗಳು ಇವೆ.

ಸದಾ ಹಸಿರಾಗಿರುವ ಕಾಡುಗಳಲ್ಲಿ ತೇಗ ಹೇರಳ. ಹಡಗು ನಿರ್ಮಾಣದಲ್ಲಿ ತೇಗ ಅಸಮಾನವಾದುದು. ಮಹಾಗನಿಯ ಅನೇಕ ವಿಧಗಳು ಇಂಡೋನೇಷ್ಯ ಫಿಲಿಪೀನ್ಸ್‌ನಲ್ಲಿ ಕಂಡುಬರುತ್ತವೆ.
ಮಧ್ಯದ ಪರ್ವತಗಳಲ್ಲಿರುವ ಪರ್ವತಸಸ್ಯಗಳು ನೆಲದ ಎತ್ತರಕ್ಕೆ ತಕ್ಕಂತೆ ಬದಲಾಗುತ್ತದೆ. ಸಾಮಾನ್ಯ ಎತ್ತರ ಪ್ರದೇಶಗಳಲ್ಲಿ ಓಕ್, ಮೇಪಲ್ ಇತ್ಯಾದಿ ಗಟ್ಟಿ ಮರಗಳು ಬೆಳೆಯುತ್ತವೆ. ಹಿಮಾಲಯಗಳ ದಕ್ಷಿಣದಲ್ಲಿ 17,000ದಿ ವರೆಗೆ ಇರುವವು ಎಲೆ ಮೊನಚಾದ ಕಾಡುಗಳು. 

ಹಿಮರೇಖೆಯ ವರೆಗೆ ಇರುವುದು ಆಲ್ಪೈನ್ ಸಸ್ಯವರ್ಗ.

ಮರುಭೂಮಿ ಪ್ರದೇಶದ ಅಂಚುಗಳಲ್ಲಿ, ಅರೇಬಿಯದಿಂದ ಭಾರತದವರೆಗೆ ಜಾಲಿಯ ಮರಗಳು ಮುಳ್ಳಿನ ಪೊದೆಗಳೊಂದಿಗೆ ಬೆಳೆಯತ್ತವೆ. ಇದರಿಂದ ನರುಗಂಪುಳ್ಳ ಅಂಟುಗಳು, ರಾಳ ಮತ್ತು ವೈದ್ಯಕ್ಕೆ ಬೇಕಾಗುವ ಔಷಧಗಳನ್ನು ತಯಾರಿಸುತ್ತಾರೆ. ಓಯಸಿಸ್ಗಳಿರುವ ಕಡೆ ಖರ್ಜೂರದ ಮರಗಳಿವೆ. 

ಏಷ್ಯ ಮೈನರಿನಲ್ಲಿ ಆಲಿವ್, ಓಕ್ ಮರಗಳಿರುವ ಮೆಡಿಟರೇನಿಯನ್ ಸಸ್ಯ ವರ್ಗವನ್ನು ಕಾಣಬಹುದು. 

ಅರೇಬಿಯದಲ್ಲಿನ ಕೆಲವೇ ಸಸ್ಯಗಳು ಬೂದುಬಣ್ಣ ಇಲ್ಲವೆ ಬೆಳ್ಳಗಿರುತ್ತವೆ.

ದಕ್ಷಿಣ ರಷ್ಯದಿಂದ ಮಂಚೂರಿಯದವರೆಗೆ ಹಬ್ಬಿರುವುದು ಸ್ಟೆಪ್-ಹುಲ್ಲುಗಾವಲು. ಮಧ್ಯೆ ಮಧ್ಯೆ ಇರುವ ಪರ್ವತಾವಳಿಗಳು ಮತ್ತು ಮರುಭೂಮಿಗಳಿಂದ ಸ್ಟೆಪ್ ಅಷ್ಟು ಪ್ರಭಾವಿತವಾಗಿಲ್ಲ. ತುರ್ಕಿಸ್ತಾನ್ ಮತ್ತು ಮಧ್ಯ ಏಷ್ಯದ ಹುಲ್ಲುಗಾವಲುಗಳು ಅನಾದಿಕಾಲದಿಂದಲೂ ದನಕರುಗಳ ಸಾಕಾಣಿಕೆಗೆ ಅನುಕೂಲ ಮಾಡಿಕೊಟ್ಟಿವೆ.

 ಪ್ರಾಣಿವರ್ಗ 
ಏಷ್ಯದ ವೈಶಾಲ್ಯಕ್ಕೆ ತಕ್ಕಂತೆ ವೈವಿಧ್ಯಪುರ್ಣ ಪ್ರಾಣಿವರ್ಗವಿದೆ. ಕುದುರೆ ಇಲ್ಲಿನ ಅಲೆಮಾರಿ ಜನಾಂಗಕ್ಕೆ ಸುಮಾರು 5,000 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತ ಬಂದಿದೆ. ಈ ಖಂಡ ಶೀಘ್ರಗಾಮಿ ಹೇಸರಗತ್ತೆಗಳ ಮೂಲಸ್ಥಾನ. ಪ್ರಾಚೀನತಮ ಮೇಕೆಗಳಿರುವುದು ತುರ್ಕಿಯಲ್ಲಿ. ಒಂಟೆ ಮರುಭೂಮಿಯ ಅತ್ಯಮೂಲ್ಯ ಪ್ರಾಣಿ. ಟಿಬೆಟಿನಲ್ಲಿ ಯಾಕ್ ಭಾರ ಹೊರುವುದಲ್ಲದೆ ಬೆಣ್ಣೆ, ಚರ್ಮ ಮತ್ತು ಮಾಂಸಗಳನ್ನು ಒದಗಿಸುತ್ತದೆ.

ಕಾಡುವೃಷಭಗಳು ಭಾರತ ಮಲಯಗಳಲ್ಲಿ ಕಂಡುಬರುತ್ತವೆ. ಭಾರತದಿಂದ ಇಂಡೋನೇಷ್ಯದವರೆಗೆ ಎಮ್ಮೆಗಳನ್ನು ಕಾಣಬಹುದು.

ಸೈಬೀರಿಯದ ವಿಶಾಲ ಪ್ರದೇಶಗಳಲ್ಲಿ ಹಿಮಸಾರಗಗಳು ಗುಂಪು ಗುಂಪಾಗಿ ಓಡಾಡುತ್ತವೆ. ಹಿಮನೆಲದ ಮೇಲೆ ಚಕ್ರಗಳಿಲ್ಲದ ವಾಹನಗಳನ್ನೆಳೆಯಲು ಇವು ಸಹಾಯಕ. ಚರ್ಮ ಮತ್ತು ಮಾಂಸಗಳನ್ನೂ ಇವು ಒದಗಿಸುತ್ತವೆ.

ನೇಪಾಲ, ಸಿಕ್ಕಿಂ, ಕಾಶ್ಮೀರ ಇತ್ಯಾದಿ ಪರ್ವತ ಪ್ರದೇಶಗಳಲ್ಲಿ ಕಸ್ತೂರಿ ಮೃಗಗಳು ಧಾರಾಳ. ಪಾಮಿರಿನಲ್ಲಿಯ ಓವಿಸ್ ಪೋಲಿ ಎನ್ನುವ ಹಿಮ ಕುರಿಗಳ ಕೋಡುಗಳು ಅತ್ಯಂತ ಉಪಯುಕ್ತ. ಏಷ್ಯದಲ್ಲಿ ಅನೇಕ ರೀತಿಯ ಚಿಗರಿಗಳುಂಟು. ಬೊಗಳುವ ಜಿಂಕೆಗಳು ಚೀನದಲ್ಲಿವೆ.

ಶ್ರೀಲಂಕ, ಸುಮಾತ್ರ, ಭಾರತ, ಮಯನ್ಮಾರ್, ಮಲಯಗಳಲ್ಲಿ ಇಂದಿಗೂ ಆನೆಗಳ ಹಿಂಡುಗಳಿವೆ ಇವುಗಳನ್ನು ಪಳಗಿಸಿ, ಅನೇಕ ರೀತಿಯ ಕಾರ್ಯಗಳನ್ನು ಇವುಗಳಿಂದ ಮಾಡಿಸಿಕೊಳ್ಳುತ್ತಾರೆ. ಈ ಖಂಡದಲ್ಲಿ ಮೂರು ರೀತಿಯ ನೀರಾನೆಗಳಿವೆ-ಒಂದು ಕೊಂಬಿನವು ನೇಪಾಲ, ಅಸ್ಸಾಂಗಳಲ್ಲಿವೆ; ಎರಡು ಕೊಂಬಿನವೂ ಜಾವ, ಸುಮಾತ್ರ, ಮಲಯ, ಮಯನ್ಮಾರ್, ಬೋರ್ನಿಯೊಗಳಲ್ಲಿವೆ. ಮಲಯ, ಸುಮಾತ್ರಗಳಲ್ಲಿ ಘೇಂಡಾಮೃಗ ಗಳಿವೆ. ಭಾರತದಲ್ಲಿ ಕಿರುಬಗಳೂ ಹಿಮಾಲಯ, ಕುನ್ಲೂನ್ಗಳಲ್ಲಿ ಚಿರತೆಗಳೂ ಉಂಟು. ಪ್ರಪಂಚದಲ್ಲೇ ವಿರಳವಾಗುತ್ತಿರುವ ಸಿಂಹಗಳು ಗುಜರಾತಿನ ಗಿರ್ ಕಾಡುಗಳಲ್ಲಿವೆ. ಸೈಬೀರಿಯ ಹಾಗೂ ಭಾರತದ ಕಾಡುಗಳಲ್ಲಿ ತೋಳಗಳೂ ಉಂಟು.

ಏಷ್ಯದಲ್ಲಿ ಅನೇಕ ವಿಧವಾದ ಕರಡಿಗಳಿವೆ. ಇವುಗಳಲ್ಲಿ ಅತ್ಯಂತ ದೊಡ್ಡದಾದ ಬಿಳಿ ಕರಡಿಗಳು ಆಗಾಗ ಆರ್ಕ್ಟಿಕ್ ತೀರಗಳಲ್ಲಿ ಕಂಡುಬರುತ್ತವೆ.
ಮಾಂಸಾಹಾರಿಗಳಲ್ಲಿ ಅತ್ಯಂತ ಭಯಾನಕ ಪ್ರಾಣಿ ಎಂದರೆ ಹುಲಿ. ಏಷ್ಯದಲ್ಲಿ ವಿನಾ ಮತ್ತೆಲ್ಲೂ ಇವು ದೊರೆಯುವುದಿಲ್ಲ. ಸಾಮಾನ್ಯವಾಗಿ ಭಾರತ, ಬೋರ್ನಿಯೊ, ಶ್ರೀಲಂಕ, ಮಲಯ, ಸುಮಾತ್ರ, ಜಾವ ಮತ್ತು ಬಾಲಿಗಳಲ್ಲಿನ ಕಾಡುಗಳಲ್ಲಿ ಇವೆ. ಸೈಬೀರಿಯದ ಹುಲಿಗೆ ಒತ್ತಾದ ಕೂದಲು ಒಂದು ವಿಶೇಷ.
ಚೀನದಲ್ಲಿ ಕಂಡುಬರುವ ಪಂಡ ಎನ್ನುವ ಮಾಂಸಾಹಾರಿ ಬಹಳ ವಿಚಿತ್ರ ಪ್ರಾಣಿ. ಕರಡಿಯಂತೆ ಕಾಣುವ ಈ ಪ್ರಾಣಿಗೆ ಬಿದಿರಿನ ಮೊಳಕೆಯೇ ಆಹಾರ. ಇದರ ತೂಕ 350 ಪೌಂಡುಗಳಿಗಿಂತಲೂ ಹೆಚ್ಚು.

ದಕ್ಷಿಣ ಏಷ್ಯದಲ್ಲಿ ಅನೇಕ ರೀತಿಯ ಮಂಗಗಳನ್ನೂ ಕಾಣಬಹುದು. ಮಲಯದಲ್ಲಿರುವ ಗಿಬನ್ ಎನ್ನುವ ನಿಡುದೋಳಿನವಾನರ ಮನುಷ್ಯನಂತೆ ಎರಡು ಕಾಲ ಮೇಲೆ ಚಲಿಸುತ್ತದೆ. ಮರದಲ್ಲಿ ವಾಸಿಸುವ ಉದ್ದತೋಳಿನ ಒರ್ಯಾಂಗೂಟ್ಯಾನ್ ಎನ್ನುವ ಉದ್ದ ತೋಳಿನ ನರವಾನರ ಬೋರ್ನಿಯೊ, ಸುಮಾತ್ರಗಳಲ್ಲಿ ವಾಸಮಾಡುತ್ತದೆ.

ಏಷ್ಯದಲ್ಲಿ ಅನೇಕ ರೀತಿಯ ಪಕ್ಷಿಗಳಿವೆ. ಮಯನ್ಮಾರ್, ಥೈಲೆಂಡ್, ಇಂಡೋ-ಚೀನ, ಮಲಯ, ಸುಮಾತ್ರ, ಬೋರ್ನಿಯೊ ಕಾಡುಗಳಲ್ಲಿ ಜೀವಂಜೀವ, ಕೊಕ್ಕರೆ, ಮತ್ತು ಬೆಳ್ಳಕ್ಕಿಗಳು ಉಂಟು. ಲ್ಯಾಮ್ಮರ್ ಜೀಯಿರ್ ಎಂಬ ಬೃಹತ್ ಪಕ್ಷಿಯ ರೆಕ್ಕೆಯ ಹರಡು 10ಳಿ. ನವಿಲುಗಳೂ ಡೇಗಗಳೂ ಬೇಕಾದಷ್ಟು ಕಂಡುಬರುತ್ತವೆ. ಪಾರಿವಾಳ, ಕೆಂಪುಂಗುರದ ಉದ್ದ ತೋಕೆಯ ಸಣ್ಣಗಿಳಿ, ಕೊಂಬುಕೊಕ್ಕಿನ ಹಕ್ಕಿ, ಕೋಗಿಲೆ, ಹದ್ದು, ಗಿಡುಗ ಮತ್ತು ಮರಕುಟುಕ, ಕಾಗೆ, ಮೈನ-ಇತ್ಯಾದಿ ಪಕ್ಷಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಗಳಲ್ಲಿ ಧಾರಾಳ.

ಭಾರತದಲ್ಲಿರುವ ವಿಷಸರ್ಪಗಳು ಅಸಂಖ್ಯಾತ. ನಾಗರಹಾವು ಪ್ರತಿವರ್ಷ ಸಾವಿರಾರು ಜನರನ್ನು ಆಹುತಿ ತೆಗೆದುಕೊಳ್ಳುತ್ತದೆ. ಹೆಬ್ಬಾವುಗಳೂ ಹೇರಳ. ಆಮೆಗಳೂ ಹೆಚ್ಚು.
ಭಾರತದ ನದಿಗಳಲ್ಲೂ ಮಲಯದ ಬಳಿಯ ಸಮುದ್ರ ತೀರಗಳಲ್ಲೂ ಮೊಸಳೆ ಗಳುಂಟು. ಡೂಗಾಂಗ್ ಎನ್ನುವ ಸಸ್ಯಾಹಾರಿ ಸ್ತನಿ ಪ್ರಾಣಿ ಹಿಂದೂ ಸಾಗರದಲ್ಲಿ ಕಾಣುತ್ತದೆ. ಆದರೆ ಕಡಲ ಹಂದಿಗಳು ಗಂಗಾನದಿಯಲ್ಲಿ ಮಾತ್ರ ಉಂಟು. ಬೇಕಲ್ ಸರೋವರದಲ್ಲಿ ಸಿಹಿನೀರಿನ ತಿಮಿಂಗಿಲಗಳನ್ನು ಕಾಣಬಹುದು. ಅಸಂಖ್ಯಾತ ಉರಗಗಳಿ ದ್ದರೂ ಊಸರವಳ್ಳಿ, ಹೆಂಟೆಗೊದ್ದಗಳು ಭಾರತ ಮತ್ತು ಶ್ರೀಲಂಕಗಳಲ್ಲಿ ಮಾತ್ರ ಕಂಡುಬರುತ್ತವೆ.

 ವ್ಯವಸಾಯ ಮತ್ತು ಪಶುಪಾಲನೆ 
ಈ ಶತಮಾನದ ಆದಿಯಲ್ಲಿ ಪ್ರಾರಂಭವಾದ ವ್ಯವಸಾಯಕ್ರಾಂತಿಯಿಂದ ಸೋವಿಯತ್ ಏಷ್ಯದ ಸ್ವರೂಪವೇ ಬದಲಾಯಿಸಿತೆನ್ನ ಬಹುದು. ಕಪ್ಪು ಮಣ್ಣಿನಿಂದ ಕೂಡಿರುವ ಸ್ಟೆಪ್ ಸೋವಿಯತ್ ಒಕ್ಕೂಟದ ಹೆಚ್ಚುವರಿ ಧಾನ್ಯ ಬೆಳೆಯುವ ಪ್ರದೇಶ. ಗೋಧಿ, ರೈ ಮತ್ತು ಬಾರ್ಲಿ ಮುಖ್ಯ ಬೆಳೆ. ಸೋವಿಯತ್ ಮಧ್ಯ ಏಷ್ಯ ಮತ್ತು ಟ್ರಾನ್ಸ್‌ ಕಕೇಷಿಯಗಳಲ್ಲಿ ಹತ್ತಿ ಪ್ರಮುಖ ಬೆಳೆ. ಸೂರ್ಯಕಾಂತಿ ಮತ್ತು ಅಗಸೆಗಳನ್ನು ಎಣ್ಣೆಗಾಗಿ ಬೆಳೆಯುತ್ತಾರೆ.

ಶುಷ್ಕ ಸ್ಟೆಪ್ಗಳಲ್ಲಿ ಕುರಿ ಮತ್ತು ಮೇಕೆಗಳನ್ನೂ ವ್ಯವಸಾಯ ಪ್ರದೇಶಗಳಲ್ಲಿ ದನಕರುಗಳನ್ನೂ ತಂಡ್ರ ಟೈಗಗಳಲ್ಲಿ ಹಿಮಸಾರಗಗಳನ್ನೂ ಸಾಕುತ್ತಾರೆ.

ನೈಋತ್ಯ ಏಷ್ಯದಲ್ಲಿ (ಮಧ್ಯ ಪ್ರಾಚ್ಯ) ಭೂಮಧ್ಯ ಸಮುದ್ರದ ಕಡೆಯಿಂದ ಪುರ್ವದ ಕಡೆಗೆ ವ್ಯವಸಾಯ ಪ್ರದೇಶ ಕಡಿಮೆಯಾಗುತ್ತ ಹೋಗಿ, ಸೌದಿ ಅರೇಬಿಯದಲ್ಲಿ ಇಲ್ಲದಂತಾಗಿದೆ. ಜೋಳ ಬತ್ತಗಳನ್ನು (ನೀರಾವರಿ ಬೆಳೆ) ಇರಾಕ್ ತುರ್ಕಿ, ಕ್ಯಾಸ್ಪಿಯನ್ ತೀರಗಳಲ್ಲೂ ಬೀಟ್ರೂಟ್ ಹತ್ತಿಗಳನ್ನು ತುರ್ಕಿ, ಇರಾನ್, ಇಸ್ರೇಲ್ಗಳಲ್ಲೂ ಬೆಳೆಯುತ್ತಾರೆ. ಇಸ್ರೇಲ್, ಲೆಬನನ್, ಸಿರಿಯಗಳಲ್ಲಿ ಈಳೆಜಾತಿಯ ಹಣ್ಣುಗಳನ್ನು ಬೆಳೆಯುತ್ತಾರಲ್ಲದೆ, ಅವನ್ನು ರಫ್ತು ಕೂಡ ಮಾಡುತ್ತಾರೆ. ಪ್ರಪಂಚದ 415 ಪಾಲು ಖರ್ಜೂರ್ ಇರಾನಿನಿಂದ ಬರುತ್ತದೆ. ಅರೇಬಿಯದಲ್ಲೂ ಇದನ್ನು 
ಬೆಳೆಯುತ್ತಾರೆ. ತುರ್ಕಿ, ಇರಾನ್ಗಳಲ್ಲಿ ದ್ರಾಕ್ಷಿಯನ್ನು ಬೆಳೆಸಿ ಒಣಗಿಸುತ್ತಾರೆ.

ಮರುಭೂಮಿ ಮತ್ತು ಅರೆ ಮರುಭೂಮಿಗಳಲ್ಲಿ ಕುರಿ ಮತ್ತು ಮೇಕೆಗಳನ್ನು ಸಾಕುವುದುಂಟು. ಅರೇಬಿಯದ ಠಾಕಣಗಳು ಬಲು ಪ್ರಸಿದ್ಧ.

ಭಾರತ, ಪಾಕಿಸ್ತಾನ, ಶ್ರೀಲಂಕಗಳಲ್ಲಿ ಶೇ. 60 ಭಾಗದ ಭೂಮಿ ವ್ಯವಸಾಯಕ್ಕೆ ಒಳಪಟ್ಟಿದೆ. ಬತ್ತ, ಗೋಧಿ, ಮಿಲೆಟ್, ಜೋಳ-ಇಲ್ಲಿನ ಮುಖ್ಯ ಆಹಾರ ಬೆಳೆಗಳು. ಬಂಗಾಲ, ಅಸ್ಸಾಂ, ಒರಿಸ್ಸಾ, ದಖನ್ ಪ್ರಸ್ಥಭೂಮಿಯ ತೀರ ಮತ್ತು ಶ್ರೀಲಂಕಗಳಲ್ಲಿ ಬತ್ತದ ಸಾಂದ್ರಬೇಸಾಯವಾಗುತ್ತಿದೆ. ಪಂಜಾಬ್ (ಭಾರತ ಮತ್ತು ಪಾಕಿಸ್ತಾನ್) ಮತ್ತು ಉತ್ತರ ಪ್ರದೇಶಗಳಲ್ಲಿ ಗೋಧಿ ಮುಖ್ಯ ಬೆಳೆ. ಗಂಗಾನದಿಯ ಮುಖಜಭೂಮಿಯಲ್ಲಿ (ಭಾರತ ಮತ್ತು ಪಾಕಿಸ್ತಾನ್) ಉತ್ತಮ ಮಟ್ಟದ ಸೆಣಬನ್ನು ಬೆಳೆಯಲಾಗುತ್ತದೆ. ಪಶ್ಚಿಮ ಪಾಕಿಸ್ತಾನ ಮತ್ತು ದಖನ್ ಪ್ರಸ್ಥಭೂಮಿಯ ವಾಯವ್ಯ ಭಾಗಗಳಲ್ಲಿ ಹತ್ತಿಯನ್ನು ಹೇರಳವಾಗಿ ಬೆಳೆಯುತ್ತಾರೆ. ಅಸ್ಸಾಂ, ಪಶ್ಚಿಮ ಬಂಗಾಲ, ಸಿಲ್ಹೆಟ್, ನೀಲಗಿರಿ ಬೆಟ್ಟಗಳು, ಶ್ರೀಲಂಕಗಳಲ್ಲಿ ವಿಶಾಲ ಚಹ ತೋಟಗಳಿವೆ. ಕೇರಳ ಶ್ರೀಲಂಕಗಳಲ್ಲಿ ರಬ್ಬರ್ ಮತ್ತು ಕರ್ನಾಟಕದಲ್ಲಿ ಕಾಫಿ ತೋಟಗಳಿವೆ.

ಆಗ್ನೇಯ ಏಷ್ಯದ ಫಲವತ್ತಾದ ಪ್ರದೇಶಗಳಲ್ಲಿ ಬತ್ತವನ್ನು ಬೆಳೆಯಲಾಗುತ್ತದೆ. ಇರವಾಡಿ, ಮೇನಾಂ, ಮೇಕಾಂಗ್ ನದಿಗಳ ಮುಖಜಭೂಮಿ ಪ್ರದೇಶಗಳಲ್ಲಿ ಅನೇಕ ಶತಮಾನಗಳಿಂದ ಬತ್ತ ಬೆಳೆಯುತ್ತಿದ್ದಾರೆ. ಇಲ್ಲಿಂದ ಬೇರೆ ಕಡೆಗೆ ಇದರ ಹೆಚ್ಚುವರಿ ರಫ್ತಾಗುತ್ತದೆ. ಉತ್ತರ ವಿಯೆಟ್ನಾಂ ಹಾಗೂ ಜಾವದಲ್ಲಿ ಬೆಳೆಯವ ಬತ್ತ ಸ್ಥಳೀಯ ಆವಶ್ಯಕತೆಗಳನ್ನು ಪುರೈಸಲು ಸಾಕು. ಜಾವ, ಫಿಲಿಪೀನ್ಸ್‌ಗಳಲ್ಲಿ ಬೆಟ್ಟಗಳನ್ನು ಮೆಟ್ಟಲುಮೆಟ್ಟಲಾಗಿ ಕಡಿದು, ಬತ್ತದ ಗದ್ದೆಗಳನ್ನು ಮಾಡಲಾಗಿದೆ. ಮಧ್ಯ ಮಯನ್ಮಾರ್, ಥೈಲೆಂಡ್, ಕೋರೆಟ್ ಪ್ರಸ್ಥಭೂಮಿಗಳಲ್ಲಿ ನೀರಾವರಿ ಅನುಕೂಲದಿಂದ ಬತ್ತ ಬೆಳೆಯಲಾಗುತ್ತದೆ. ತಂಬಾಕು, ಕಬ್ಬು, ಸೋಯಾಬೀನುಗಳನ್ನು ಇಲ್ಲೆಲ್ಲ ಬೆಳೆಯುತ್ತಾರೆ. ಇಲ್ಲಿನ ಬೆಳೆಗಳಲ್ಲಿ ತೋಟದವು ಬಲು ಮುಖ್ಯ. ಮಲೆಯ ಮತ್ತು ಇಂಡೋನೇಷ್ಯಗಳು ಪ್ರಪಂಚದ ಹೆಚ್ಚು ಪಾಲು ಸ್ವಾಭಾವಿಕ ರಬ್ಬರನ್ನು ಒದಗಿಸುತ್ತವೆ. ದಕ್ಷಿಣ ವಿಯೆಟ್ನಾಂ ಮತ್ತು ಥೈಲೆಂಡ್ಗಳಲ್ಲೂ ಇದನ್ನು ಬೆಳೆಯುತ್ತಾರೆ. ಇಂಡೊನೇಷ್ಯ, ಮಲೆಯಗಳು ಕೊಬ್ಬರಿ ತಯಾರಿಕೆಯಲ್ಲಿ ಪ್ರಮುಖವಾದುವು. ಮಲೆಯ, ಸುಮಾತ್ರಗಳಲ್ಲಿ ತಾಳೆಮರ ಹೆಚ್ಚು ಜನಪ್ರಿಯ. ಜಾವದಲ್ಲಿ ಚಹ ಬೆಳೆಯುತ್ತಾರೆ.

ಚೀನದ ಉತ್ತರದಲ್ಲಿ ಗೋಧಿ, ಬಾರ್ಲಿ, ಸೋಯಾಬೀನ್ಸ್‌ ಬೆಳೆಯುತ್ತಾರೆ. ದಕ್ಷಿಣ ಚೀನ ಮತ್ತು ಫಾರ್ಮೋಸಗಳಲ್ಲಿ ಬತ್ತ ಪ್ರಮುಖ ಬೆಳೆ. ಮಂಚೂರಿಯದಲ್ಲಿ ಸೋಯಾಬೀನ್ಸನ್ನೂ ಚೀನದ ಉತ್ತರಾರ್ಧದಲ್ಲಿ ಜೋಳವನ್ನೂ ಬೆಳೆಯಲಾಗುವುದು. ಉತ್ತರ ಚೀನ ಮಧ್ಯ ಯಾಂಗ್ಟ್ಸಿಗಳಲ್ಲಿ ಹತ್ತಿಯೂ ದಕ್ಷಿಣ ಚೀನ ಬೆಟ್ಟಗಳ ಮತ್ತು ಫಾರ್ಮೋಸ ಪ್ರದೇಶಗಳಲ್ಲಿ ಚಹವೂ ಮುಖ್ಯ ವಾಣಿಜ್ಯ ಬೆಳೆಗಳು. ಎಳ್ಳು, ರೇಪ್ ಮತ್ತು ಸೋಯಾಬೀನ್ಸ್‌ ಬೆಳೆಯಲ್ಲಿ ಚೀನದ್ದು ಮೊದಲನೆಯ ಸ್ಥಾನ. ದಕ್ಷಿಣ ಚೀನ ಮತ್ತು ಫಾರ್ಮೋಸಗಳಲ್ಲಿ ಕಬ್ಬು, ತಂಬಾಕು ಮತ್ತು ಈಳೆಜಾತಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಜಪಾನ್ ಕೊರಿಯಗಳಲ್ಲಿ ವ್ಯವಸಾಯಕ್ಕೆ ತಂದಿರುವ ಪ್ರದೇಶಗಳು ಬಲು ಕಡಿಮೆ. ಆದರೂ ಉತ್ತಮ ವ್ಯವಸಾಯ ವಿಧಾನಗಳನ್ನು ಅನುಸರಿಸಿ, ಹೆಚ್ಚಿನ ಬೆಳೆ ತೆಗೆಯುತ್ತಾರೆ. ಜಪಾನಿನಲ್ಲಿ ಬತ್ತದ ಸಾಗುವಳಿಯಾಗುವುದು ನೀರಾವರಿಯಿಂದ. ಉತ್ತರ ಕೊರಿಯದಲ್ಲಿ ಮಿಲೆಟ್ಸ್‌ ಮತ್ತು ಗೋಧಿಯೂ ದಕ್ಷಿಣ ಕೊರಿಯದಲ್ಲಿ ಬಾರ್ಲಿಯೂ ಮುಖ್ಯ ಆಹಾರ ಬೆಳೆಗಳು. ಜಪಾನಿನಲ್ಲಿ ಗೋಧಿ, ಬಾರ್ಲಿ, ಓಟ್ಸ್‌-ಇವು ಬತ್ತದ ಅನಂತರದ ಮುಖ್ಯ ಬೆಳೆಗಳು. ಕೊರಿಯದಲ್ಲಿ ಹತ್ತಿಯೂ ದಕ್ಷಿಣ ಜಪಾನಿನಲ್ಲಿ ಹಿಪ್ಪುನೇರಳೆ ಮತ್ತು ಚಹವೂ ವಾಣಿಜ್ಯ ಬೆಳೆಗಳು.
ಖನಿಜಗಳು ಮತ್ತು ಕೈಗಾರಿಕೆಗಳು: ಏಷ್ಯದಲ್ಲಿ ಹೇರಳವಾದ ಖನಿಜ ಸಂಪತ್ತಿದೆ. ಮುಖ್ಯವಾದ ವಲಯಗಳಿವು.

  (ಎ) ಸೋವಿಯತ್ ಏಷ್ಯ: ಕ್ಯಾಸ್ಪಿಯನ್ ಸುತ್ತಮುತ್ತ ಎಣ್ಣೆಬಾವಿಗಳಿವೆ. ಮಧ್ಯ ಏಷ್ಯದ ಫರ್ಗನಾ, ಲೀನಾ ಬಯಲುಗಳಲ್ಲೂ ಸ್ಯಾಕಲೀನ್ ಬಂiÀÄಲುಗಳಲ್ಲೂ ಎಣ್ಣೆ ಸಾಮಾನ್ಯ ಪ್ರಮಾಣದಲ್ಲಿ ದೊರೆಯುತ್ತದೆ. ಪಶ್ಚಿಮ ಸೈಬೀರಿಯದ ಕುಜ್ನೆಟ್ಸ್ಕ್‌ ಬಂiÀÄಲು ಸೋವಿಯತ್ ಒಕ್ಕೂಟದ ಎರಡನೆಯ ದೊಡ್ಡ ಕಲ್ಲಿದ್ದಲುಗಣಿ ಪ್ರದೇಶ. ಕಾeóÁಕ್ಸ್ತಾನದಲ್ಲಿನ ಕಾರಾಗಾಂಡಾ ಕಲ್ಲಿದ್ದಲು ಗಣಿಗಳು ಯೂರಲ್ ಪರ್ವತಗಳಲ್ಲಿರುವ ಲೋಹ ಕೈಗಾರಿಕೆಗಳಿಗೆ ಕಲ್ಲಿದಲನ್ನು ಒದಗಿಸುತ್ತವೆ. ಪುರ್ವ ಸೈಬೀರಿಯದಲ್ಲಿನ ಇರ್ಕಟ್ಸ್ಕ ಮತ್ತು ವ್ಲಾಡಿವೋಸ್ಟಾಕ್  ಬಯಲುಗಳಲ್ಲಿನ ಕಲ್ಲಿದ್ದಲು ಸ್ಥಳೀಯ ಕೈಗಾರಿಕೆಗಳಿಗೆ ಸಹಾಯಕವಾಗಿರುವುದಲ್ಲದೆ, ಟ್ರಾನ್ಸ್‌-ಸೈಬೀರಿಯನ್ ರೈಲ್ವೆಗೆ ಅನುಕೂಲಕರ. ಟುಂಗುಸ್ಕ ಮತ್ತು ಲೀನಾ ಬಂiÀÄಲುಗಳಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಹೇರಳವಾಗಿವೆಯೆಂದು ನಂಬಲಾಗಿದೆ.

ಮಧ್ಯ ಏಷ್ಯದ ಟುಯ-ಮುಯುನ್ನಲ್ಲಿ ಯುರೇನಿಯಂ ದೊರೆಯುತ್ತದೆ. ಕುಜ್ನೆಟ್ಸ್ಕ್‌, ಖಬರೋವ್ಸ್ಕ್‌, ಕಾeóÁಕ್ಸ್ತಾನ್ಗಳಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಂ, ಕೋಬಾಲ್ಟ್‌ ಇವೆ. ಬಾಲ್ಕಾಷ್ ಸರೋವರದ ಪುರ್ವದಲ್ಲಿ ತಾಮ್ರವುಂಟು. ಕಾeóÁಕಾಸ್ತನ್, ಮಧ್ಯ ಏಷ್ಯ, ಪಶ್ಚಿಮ ಸೈಬೀರಿಯಗಳಲ್ಲಿ ಅನೇಕ ತಾಮ್ರದ ಗಣಿಗಳಿವೆ. ಪುರ್ವ ಸೈಬೀರಿಯದಲ್ಲಿ ತವರವಿದೆ. ಕುಜ್ನೆಟ್ಸ್ಕ್‌ ಸತುವಿಗೂ ಸೋರಿಲಿಸ್ಕ್‌ ನಿಕಲಿಗೂ ಕಾeóÁಕ್ಸ್ತಾನ್ ಮತ್ತು ಕುಜ್ನೆಟ್ಸ್ಕ್‌ ಅಲ್ಯೂಮಿನಿಯಂಗೂ ಪ್ರಸಿದ್ಧ. ಇವಲ್ಲದೆ ಸೈಬೀರಿಯದಲ್ಲಿ ನಿಕಲ್, ಬಾಕ್ಸೈಟ್ ಮತ್ತು ಅಲ್ಯೂಮಿನಿಯಂ, ಯೂರಲ್ ಪರ್ವತಗಳಲ್ಲಿ ತಾಮ್ರ, ಕ್ರೋಮಿಯಂ, ಚಿನ್ನ ಮತ್ತು ಪಚ್ಚೆಗಳ ಹೇರಳ ನಿಕ್ಷೇಪಗಳಿವೆಯೆಂದು ಊಹಿಸಲಾಗಿದೆ.

ಖನಿಜಗಳು ಸಿಗುವ ಪ್ರದೇಶಗಳಲ್ಲಿ ಕೈಗಾರಿಕೆಗಳು ಬೆಳೆದಿರುವುದು ಆಶ್ಚರ್ಯವಲ್ಲ. ಆದರೂ ಸೋವಿಯತ್ ಒಕ್ಕೂಟದ ಐರೋಪ್ಯ ಪ್ರದೇಶದಷ್ಟು ಮಟ್ಟಿಗೆ ಏಷ್ಯನ್ ಪ್ರದೇಶದ ಅಭಿವೃದ್ಧಿಯಾಗಿಲ್ಲ. ಕುಜ್ನೆಟ್ಸ್ಕ್‌ನಲ್ಲಿ ಅನೇಕ ಭಾರಿ ಕೈಗಾರಿಕೆಗಳು ಸ್ಥಾಪನೆಯಾಗಿವೆ.  ಟ್ರಾನ್ಸ್‌-ಸೈಬೀರಿಯನ್ ರೈಲ್ವೆಯೂ ಮಧ್ಯ ಏಷ್ಯದಲ್ಲಿ ಎಂಜಿನಿಯರಿಂಗ್ ಮತ್ತಿತರ ಕೈಗಾರಿಕೆಗಳೂ ಸ್ಥಾಪನೆಯಾಗಿವೆ. ಸೋವಿಯತ್ ಮಧ್ಯ ಏಷ್ಯದಲ್ಲಿ ಬಟ್ಟೆಗಿರಣಿಗಳೂ ವ್ಲಾಡಿವೋಸ್ಟಾಕ್ ಸುತ್ತಮುತ್ತ ಮರ ಕೊಯ್ಯುವ ಕೈಗಾರಿಕೆಗಳೂ ಹರಡಿವೆ.

 (ಬಿ) ಪಶ್ಚಿಮ ಏಷ್ಯ: ಅಮೂಲ್ಯವಾದ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಗಣಿಗಳು ಇಲ್ಲಿರುವುದು ಈ ಪ್ರದೇಶದ ಅದೃಷ್ಟವೆಂದೇ ಹೇಳಬೇಕು. ತುರ್ಕಿಯಲ್ಲಿರುವ ಅಮೂಲ್ಯ ಕಲ್ಲಿದ್ದಲು ಗಣಿಗಳು ಕೈಗಾರಿಕೆಗಳಿಗೆ ಸಹಾಯಕ. ಯುಫ್ರೇಟೀಸ್-ಟೈಗ್ರಿಸ್ ಮತ್ತು ಪರ್ಷಿಯನ್ ಕೊಲ್ಲಿಯ ಸುತ್ತಮುತ್ತಲ ಮರುಭೂಮಿ ಪ್ರದೇಶಗಳಲ್ಲಿ ಅಪಾರವಾದ ಪೆಟ್ರೋಲಿಯಂ ನಿಕ್ಷೇಪಗಳಿದ್ದು, ಅನೇಕ ಎಣ್ಣೆಬಾವಿಗಳಿವೆ. eóÁಗ್ರಾಸ್ ಪರ್ವತಗಳ ಪಾದಗಳ ಬಳಿಯಲ್ಲಿ ಇರಾನ್ ಇರಾಕ್ಗಳಲ್ಲಿ ವಿಶಾಲ ಎಣ್ಣೆಬಾವಿಗಳುಂಟು. ಆದರೆ ಇತ್ತೀಚೆಗೆ ಪರ್ಷಿಯನ್ ಖಾರಿಯ ಕುವೈತ್, ಬರೈನ್, ಕಾಟಾರ್ ಇತ್ಯಾದಿ ದೇಶಗಳು ಪೆಟ್ರೋಲಿಯಂ ತಯಾರಿಕೆಗೆ ಹೆಸರಾಗಿವೆ.

ತುರ್ಕಿಯಲ್ಲಿ ದೊರಕುವ ಖನಿಜಗಳು ಅನೇಕ. ಭೂಮಧ್ಯಸಮುದ್ರ ತೀರಗಳಲ್ಲಿ ಮ್ಯಾಂಗನೀಸ್ ದೊರೆಯುತ್ತದೆ. ಈ ದೇಶ ಕ್ರೋಂ ತಯಾರಿಕೆಯಲ್ಲಿ ಪ್ರಪಂಚದಲ್ಲಿ ಮೊದಲನೆಯ ಸ್ಥಾನ ಪಡೆದಿದೆ. ತಾಮ್ರ ಇನ್ನೊಂದು ಮುಖ್ಯ ಲೋಹ. ಸೌದಿ ಅರೇಬಿಯದಲ್ಲಿ ಚಿನ್ನವೂ ಉಂಟು. 

ಮೃತ ಸರೋವರದ ಬಳಿ ಪೊಟ್ಯಾಷ್, ತುರ್ಕಿಯಲ್ಲಿ ಗಂಧಕ, ಜಾರ್ಡನ್ನಲ್ಲಿ ರಂಜಕ ಶಿಲೆ ಹೆಸರಿಸುವಂಥ ಖನಿಜಗಳು.

ಯುಫ್ರೇಟೀಸ್-ಟೈಗ್ರಿಸ್ ಕಣಿವೆ ಹೇರಳವಾದ ತಾಮ್ರ, ಕಬ್ಬಿಣ ಮತ್ತು ಗಂಧಕ ನಿಕ್ಷೇಪಗಳನ್ನು ಹೊಂದಿದೆ. ಇಲ್ಲಿಯ ಸೀಸದ ಗಣಿಗಳು ಅನೇಕ ಶತಮಾನಗಳಿಂದ ನಡೆದುಕೊಂಡು ಬರುತ್ತಿವೆ.

ಈ ಪ್ರದೇಶದಲ್ಲಿ ಪೆಟ್ರೋಲಿಯಂ ಶೋಧನೆ ಮುಖ್ಯ ಕೈಗಾರಿಕೆ. ತುರ್ಕಿ, ಸಿರಿಯ, ಲೆಬನನ್, ಇಸ್ರೇಲ್ ಮತ್ತು ಇರಾನಿನ ಅನೇಕ ನಗರಗಳಲ್ಲೂ ಇರಾಕ್, ಆಫ್ಘಾನಿಸ್ತಾನಗಳ ರಾಜಧಾನಿಗಳಲ್ಲೂ ಹತ್ತಿ ಗಿರಣಿ ಕೈಗಾರಿಕೆಗಳುಂಟು.

 (ಸಿ) ದಕ್ಷಿಣ ಏಷ್ಯ: ಭಾರತದಲ್ಲಿ ಹೇರಳವಾದ ಕಲ್ಲಿದ್ದಲು ನಿಕ್ಷೇಪಗಳಿವೆ. ದಖನ್ ಪ್ರಸ್ಥಭೂಮಿಯ ಈಶಾನ್ಯದಲ್ಲಿ ಇದು ಕೇಂದ್ರೀಕೃತ. ಅಸ್ಸಾಮಿನ ದಿಗ್ಬಾಯ್ ಮತ್ತು ಪಶ್ಚಿಮ ಪಾಕಿಸ್ಥಾನದ ಅಟಕ್ನಲ್ಲಿ ಪೆಟ್ರೋಲಿಯಂ ಎಣ್ಣೆಬಾವಿಗಳುಂಟು. ಪ್ರಪಂಚದಲ್ಲೇ ಶ್ರೇಷ್ಠವಾದ ಕಬ್ಬಿಣದ 

ಅದಿರು ಮತ್ತು ಮ್ಯಾಂಗನೀಸ್ ದೊರಕುವುದು ಭಾರತದ ದಖನ್ ಪ್ರಸ್ಥಭೂಮಿಯ ಈಶಾನ್ಯದಲ್ಲಿ. ಇಲ್ಲಿ ತಾಮ್ರ, ತವರ, ಕ್ರೋಮೈಟ್, ಚಿನ್ನ, ಬಾಕ್ಸೈಟುಗಳೂ ಉಂಟು. ರಾಜಾಸ್ಥಾನದ ಗಣಿಗಳಿಂದ ತೆಗೆಯುವ ಲವಣದ ಜೊತೆಗೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ ಸಮುದ್ರದಿಂದ ಉಪ್ಪನ್ನು ತಯಾರಿಸಲಾಗುತ್ತಿದೆ. ಪ್ರಪಂಚದ ಕಾಗೆಬಂಗಾರದ ಉತ್ಪತ್ತಿಯಲ್ಲಿ ಶೇ. 80 ದೊರಕುವುದು ಛೋಟಾನಾಗಪುರದಲ್ಲಿ (ಭಾರತ). ಮೊನಾಜೈóಟ್ ನಿಕ್ಷೇಪಗಳಿರುವುದು ಕೇರಳದಲ್ಲಿ. ಪಾಕಿಸ್ತಾನದಲ್ಲಿ ಕ್ರೋಮೈಟ್, ಲವಣಶಿಲೆ ಇತ್ಯಾದಿಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತವೆ.

ಭಾರತದಲ್ಲಿ ಎರಡು ಪ್ರಮುಖ ಕೈಗಾರಿಕಾ ವಲಯಗಳಿವೆ: 1 ಜೆಮ್ಷೆಡ್ಪುರದಿಂದ ಕೋಲ್ಕೊತ್ತದ ವರೆಗಿನ ಪ್ರದೇಶ, 2. ಮುಂಬಯಿಂದ ಅಹಮದಾಬಾದ್ವರೆಗಿನ ಪ್ರದೇಶ. ಇತರ ಕಡೆಗಳಲ್ಲೂ ಕೈಗಾರಿಕೆಗಳುಂಟು.

 (ಡಿ) ಆಗ್ನೇಯ ಏಷ್ಯ: ಆಗ್ನೇಯ ಏಷ್ಯದಲ್ಲಿನ ಖನಿಜ ಸಂಪತ್ತು ಗಮನಾರ್ಹವಾದದ್ದು. ಪ್ರಪಂಚದ ತವರದ ಉತ್ಪತ್ತಿಯಲ್ಲಿ  ಭಾಗ ಬರುವುದು ಮಲೆಯದಿಂದ. ಮಲೆಯ ಮತ್ತು ಇಂಡೋನೇಷ್ಯಗಳು ತವರ ತಯಾರಿಕೆಯಲ್ಲಿ ಪ್ರಪಂಚದಲ್ಲಿ ಮೊದಲನೆಯ ಮತ್ತು ಮೂರನೆಯ ಸ್ಥಾನಗಳನ್ನೂ ಥೈಲೆಂಡ್ ಮತ್ತು ಮಯನ್ಮಾರ್ಗಳು ಐದನೆಯ ಮತ್ತು ಎಂಟನೆಯ ಸ್ಥಾನಗಳನ್ನೂ ಪಡೆದಿವೆ. ಉತ್ತರ ವಿಯೆಟ್ನಾಮಿನಲ್ಲಿ ಕಲ್ಲಿದ್ದಲು ಗಣಿಗಳಿವೆ. ಮಲೆಯ, ಬೋರ್ನಿಯೊ, ಸುಮಾತ್ರಗಳಲ್ಲಿ ಈ ನಿಕ್ಷೇಪಗಳುಂಟು. ಪ್ರಪಂಚದ ದೃಷ್ಟಿಯಿಂದ ಮುಖ್ಯವಾದ 
ಎಣ್ಣೆಬಾವಿಗಳು ಮಧ್ಯ ಮಯನ್ಮಾರ್, ಜಾವ, ಸುಮಾತ್ರ ಬೋರ್ನಿಯಗಳಲ್ಲಿವೆ. ಮಲೆಯ, ಫಿಲಿಪೀನ್ಸ್‌ಗಳಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಜಪಾನಿಗೆ ರಫ್ತು ಮಾಡಲಾಗುತ್ತದೆ. ಉತ್ತರ ವಿಯೆಟ್ನಾಂ, ಮಲೆಯ, ಜಾವ, ಫಿಲಿಪೀನ್ಸ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮ್ಯಾಂಗನೀಸ್ ದೊರೆಯುತ್ತದೆ. ಮಧ್ಯ ಮಯನ್ಮಾರ್ನಲ್ಲಿ ಸೀಸ, ಸತು ಮತ್ತು ನಿಕ್ಕಲ್ ದೊರೆಯುತ್ತವೆ. ಪ್ರಪಂಚದ ಕ್ರೋಮಿಯಂ ತಯಾರಿಕೆಯಲ್ಲಿ ಫಿಲಿಪೀನ್ಸ್‌ನದು 4ನೆಯ ಸ್ಥಾನ. ಫಿಲಿಪೀನ್ಸ್‌, ಥೈಲೆಂಡ್, ಮಲೆಯ, ಸುಮಾತ್ರ, ದಕ್ಷಿಣ ವಿಯೆಟ್ನಾಂಗಳಲ್ಲಿ ಚಿನ್ನದೊರೆತರೂ ಅಷ್ಟೇನೂ ಮುಖ್ಯವಲ್ಲ.

ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿಲ್ಲ. ಶಕ್ತಿಸಾಧನಗಳಿಲ್ಲದ್ದೇ ಕಾರಣ. ಸಿದ್ಧವಸ್ತು ತಯಾರಿಕೆಯ ಕೈಗಾರಿಕೆಗಳು ಇಲ್ಲಿಲ್ಲ. ಸಿಂಗಪುರದಲ್ಲಿ ತವರ ಕರಗಿಸುವ ಕೈಗಾರಿಕೆ ಯುಂಟು. ಜಾವದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳೂ ಮಯನ್ಮಾರ್, ಥೈಲೆಂಡ್, ಇಂಡೋನೇಷ್ಯ, ಫಿಲಿಪೀನ್ಸ್‌ ಮತ್ತು ಉತ್ತರ ವಿಯೆಟ್ನಾಂಗಳಲ್ಲಿ ಹತ್ತಿ ಗಿರಣಿ ಕೈಗಾರಿಕೆಗಳೂ ಇವೆ.

 (ಇ) ಪೂರ್ವ ಏಷ್ಯ: ಕಲ್ಲಿದ್ದಲು, ಮ್ಯಾಂಗನೀಸ್, ಕಬ್ಬಿಣ, ಬಾಕ್ಸೈಟ್, ತವರ ಆಂಟಿಮೊನಿ, ಬಿಸ್ಮತ್, ಗ್ರಾಫೈಟ್ ಮತ್ತು ಮ್ಯಾಗ್ನಸೈಟ್ಗಳು ಮುಖ್ಯ ಖನಿಜಗಳು. ಚೀನದ ಪ್ರಸ್ಥಭೂಮಿಯಲ್ಲಿ ಪೆಟ್ರೋಲಿಯಂ, ಉಪ್ಪು ದೊರೆಯುತ್ತವೆ. ಜಪಾನಿನಲ್ಲಿ ಖನಿಜಗಳು ಸಾಕಷ್ಟಿಲ್ಲವಾದರೂ ಇದು ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ದೇಶ.

ಮಂಚೂರಿಯ ಕೊರಿಯಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯೂ ಚೀನದಲ್ಲಿ ಕಬ್ಬಿಣ ಮತ್ತು ಉಕ್ಕು, ನೂಲು, ಯಂತ್ರೋಪಕರಣ, ವಾಹನ ಮತ್ತು ರಾಸಾಯನಿಕ ವಸ್ತುಗಳ ಭಾರಿ ಪ್ರಮಾಣದ ಕೈಗಾರಿಕೆಗಳೂ ಬೆಳೆದಿವೆ.

 ಜನಸಂಖ್ಯೆ 
ಏಷ್ಯ ಖಂಡದಲ್ಲಿ ಜನಸಂಖ್ಯೆಯದು ಒಂದು ಸಮಸ್ಯೆ. ಪ್ರಪಂಚದ ಜನಸಂಖ್ಯೆಯಲ್ಲಿ ಶೇ. 69 (ಸೋವಿಯತ್ ವಿಭಾಗವನ್ನು ಬಿಟ್ಟು) ಈ ಖಂಡದಲ್ಲಿದೆ. ಏಷ್ಯದ ಜನಸಂಖ್ಯೆ 164,05,39,000. ಜನಸಾಂದ್ರತೆ ಚ.ಕಿಮೀ.ಗೆ 300. ಪ್ರ.ಶ. 2020ರಷ್ಟು ಹೊತ್ತಿಗೆ ಏಷ್ಯದ  ಜನಸಂಖ್ಯೆ ಬಹಳ ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ ಮತ್ತು ಜನಸಾಂದ್ರತೆ 421 ಆಗುವುದೆಂದು ನಿರೀಕ್ಷಿಸಲಾಗಿದೆ. ಹೆಚ್ಚು ಜನ ಗ್ರಾಮವಾಸಿಗಳು. ಜಪಾನ್ ವಿನಾ ಉಳಿದಕಡೆಗಳಲ್ಲಿ ಕೈಗಾರಿಕಾನಗರಗಳ ಜನಸಂಖ್ಯೆಯ ಪ್ರಮಾಣ ಕಡಿಮೆ.

ಪಶ್ಚಿಮ ಪಾಕಿಸ್ತಾನದಿಂದ ಹಿಡಿದು ಉತ್ತರ ಚೀನ ಮತ್ತು ಜಪಾನ್ವರೆಗಿನ ಪ್ರದೇಶದಲ್ಲಿ ಜನನಿವಾಸಕ್ಕೆ ಅನುಕೂಲಕರ ವಾಯುಗುಣ, ಫಲವತ್ತಾದ ಭೂಮಿ, ವ್ಯವಸಾಯ ಮತ್ತು ಕಸಬು ಇವೆ. ಇಲ್ಲಿನ ಜನಸಾಂದ್ರತೆ ಚ.ಕಿಮೀ.ಗೆ. 400. ಪುರ್ವ ಚೀನದಲ್ಲಿ ಇದು 900ಕ್ಕಿಂತ ಹೆಚ್ಚಾದರೂ, ಕೆಲವು ವ್ಯವಸಾಯ ಪ್ರದೇಶಗಳಲ್ಲಿ ಚ.ಕಿಮೀ.ಗೆ 2000ದಿಂದ 3000ದವರೆಗೂ ಇದೆ. ಜಗತ್ತಿನ ಮೂರು ಅತ್ಯಂತ ಜನ ಸಮದ್ಧಿ ಪ್ರದೇಶಗಳಲ್ಲಿ ಎರಡು ಏಷ್ಯದಲ್ಲೇ ಇವೆ. ಇವುಗಳಲ್ಲಿ ಪುರ್ವ ಚೀನವೇ ಕೇಂದ್ರವಾಗಿರುವ ಪುರ್ವ ಏಷ್ಯ ಅತ್ಯಂತ ದೊಡ್ಡ ಪ್ರದೇಶ. 

ಎರಡನೆಯ ಜನಸಾಂದ್ರ ಪ್ರದೇಶವೆಂದರೆ ಆಫ್ಘಾನಿಸ್ತಾನ್, ಪಾಕಿಸ್ತಾನ್, ಭಾರತ, ಸಿಲೋನ್ಗಳನ್ನೊಳಗೊಂಡ ದಕ್ಷಿಣ ಏಷ್ಯ. ಇಡೀ ಖಂಡದ ವಿಸ್ತೀರ್ಣದಲ್ಲಿ ಅರ್ಧಕ್ಕಿಂತ ಕಡಿಮೆ ಇರುವ ದಕ್ಷಿಣ ಹಾಗೂ ಆಗ್ನೇಯ ಏಷ್ಯದಲ್ಲಿ ಏಷ್ಯದ ಶೇಕಡಾ 90ರಷ್ಟು ಜನವಾಸಿಸುತ್ತಾರೆ.   

(ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ